April 28, 2024

Chitradurga hoysala

Kannada news portal

ಜಿಲ್ಲೆಯ 106 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

1 min read

ಮಾರ್ಚ್ 31ರವರೆಗೆ ಕೋವಿಡ್ ಲಸಿಕೆ ನೀಡಿಕೆ
ಜಿಲ್ಲೆಯ 106 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ಚಿತ್ರದುರ್ಗ,ಮಾರ್ಚ್17:
ಜಿಲ್ಲೆಯಲ್ಲಿ ಮಾರ್ಚ್ 6 ರಿಂದ ಕೋವಿನ್ 2.0 ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು, ಮಾರ್ಚ್ 31 ರವರೆಗೆ ಜಿಲ್ಲೆಯ ಸರ್ಕಾರಿ ಸಂಸ್ಥೆಗಳು ಹಾಗೂ 2 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 106 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೋವಿಡ್ ಲಸಿಕೆ ಕೋವಿನ್ 2.0 ನೀಡಿಕೆ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಸಂಸ್ಥೆಗಳಾದ 81 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಆರೋಗ್ಯ ಕೇಂದ್ರಗಳು, 11 ಸಮುದಾಯ ಆರೋಗ್ಯ ಕೇಂದ್ರಗಳು, 5 ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಸಂಸ್ಥೆಗಳಾದ ಬಸವೇಶ್ವರ ವೈದ್ಯಕೀಯ ಕಾಲೇಜು ಹಾಗೂ ಅಕ್ಷಯ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಕೋವಿಡ್ ಲಸಿಕೆ ಹಾಕಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಹಾಗೂ 45-59 ವರ್ಷ ವಯಸ್ಸಿನ ಸಕ್ಕರೆ ಕಾಯಿಲೆ, ಬಿಪಿ, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಲಸಿಕೆ ನೀಡಿಕೆಗೆ ಸಮಯ ನಿಗಧಿಪಡಿಸಲಾಗಿದ್ದು, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಲಸಿಕೆ ಕುರಿತು ಸಾರ್ವಜನಿಕರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸುವುದರಿಂದ ಕೋವಿಡ್ ಎರಡನೇ ಅಲೆಯನ್ನು ತಡೆಗಟ್ಟಬಹುದಾಗಿದೆ ಎಂದರು.  
ಜಿಲ್ಲೆಯಲ್ಲಿ 1425 ಆಶಾ ಕಾರ್ಯಕರ್ತೆಯರು ಇದ್ದಾರೆ. ಅವರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಅವರು ಮನೆಮನೆಗೆ ಭೇಟಿ ನೀಡಿ ದಿನಕ್ಕೆ 8 ರಿಂದ 10 ಜನರನ್ನು ಕಡ್ಡಾಯವಾಗಿ ಗುರುತಿಸಿ ಲಸಿಕೆ ಹಾಕಿಸಲು ಗುರಿ ನಿಗಧಿಪಡಿಸಲಾಗಿದೆ. ಇದರ ಜೊತೆಗೆ ಗ್ರಾಮ ಮಟ್ಟದ ಆರೋಗ್ಯ ಸಮಿತಿಗಳ ಮೂಲಕವೂ ಕೋವಿಡ್ ಲಸಿಕೆ ಜಾಗೃತಿ ಕಾರ್ಯಕ್ರಮವನ್ನು ಗ್ರಾಮಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕೋವಿಡ್ ಲಸಿಕೆ ನೊಂದಣಿಯನ್ನು ಎರಡು ಬಗೆಯಲ್ಲಿ ಮಾಡಬಹುದಾಗಿದೆ. ಆರೋಗ್ಯ ಸೇತು ಆಪ್ ಮೂಲಕ ನೊಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದು. ಖುದ್ದಾಗಿ ನೇರವಾಗಿ ಆಧಾರ್ ಕಾರ್ಡ್ ಮೂಲಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ನೊಂದಣಿಯಾಗಿ ಲಸಿಕೆ ಪಡೆಯಬಹುದಾಗಿದೆ. ಮೊದಲ ಡೋಸ್ ಲಸಿಕೆ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ಪಡೆಯಬೇಕು ಎಂದರು.
ಕೋವಿಡ್-19 ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ಭಯ, ಆತಂಕಕ್ಕೆ ಒಳಗಾಗದೇ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬೇಕು ಎಂದರು.
ಕೋವಿಡ್-19 ತಡೆಗಟ್ಟುವಿಕೆಗೆ ಮುಂಜಾಗ್ರತಾ ಕ್ರಮಗಳು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಬರುವ ನರ್ಸಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನೆಗಟಿವ್ ವರದಿ ಇದ್ದರೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಲಾರಿ ಚಾಲಕರು ಹಾಗೂ ಕ್ಲಿನರ್‍ಗಳಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಡಾಬ, ಹೋಟೆಲ್, ಲಾರಿ ಮಾಲೀಕರ ಜೊತೆ ಸಭೆ ಕರೆದು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುವುದು ಎಂದರು.
ಸರ್ಕಾರದ ಎಸ್‍ಒಪಿ ಮಾನದಂಡಗಳ ಅನ್ವಯ ಮದುವೆ ಸಮಾರಂಭಗಳಿಗೆ ತೆರೆದ ಹಾಲ್‍ಗಳಲ್ಲಿ 500 ಜನರಿಗೆ ಮತ್ತು ಕ್ಲೋಸ್ ಹಾಲ್‍ಗಳಲ್ಲಿ 200 ಜನರಿಗೆ ಮಾತ್ರ  ಸೀಮಿತಗೊಳಿಸಲಾಗಿದೆ. ಶವಸಂಸ್ಕಾರಕ್ಕೆ ಕೇವಲ 50 ಜನರಿಗೆ ಮಾತ್ರ ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 69 ಮಂದಿ ಮರಣ ಹೊಂದಿದ್ದಾರೆ. ಕಳೆದ ಮೂರು ತಿಂಗಳಿಂದ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 76 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 70 ಜನ ಹೋಂ ಐಸೋಲೇಷನ್ ಹಾಗೂ 6 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
 ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರೊಂದಿಗೆ ಕೈಜೋಡಿಸಬೇಕೆಂದು ತಿಳಿಸಿದರು.  
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ಇದ್ದರು.

About The Author

Leave a Reply

Your email address will not be published. Required fields are marked *