ಸರ್ಕಾರ ಕಾಲಾಹರಣ ಮಾಡುತ್ತಿದೆ: ರಕ್ಷ ರಾಮಯ್ಯ ಆರೋಪ
1 min readಚಿತ್ರದುರ್ಗ ಮಾ. ೨೦
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿಯೊಂದು ವಿಚಾರದಲ್ಲಿಯೂ ವಿಫಲವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸಿ.ಡಿ. ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಅಭಿವೃದ್ಧಿಯ ಬದಲು ಕಾಲಾಹರಣ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷ ರಾಮಯ್ಯ ಆರೋಪ ಮಾಡಿದರು.
ನಗರದ ಬೃಹನ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾರ್ಮಿಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ಬೆಲೆ ಏರಿಕೆಯಾಗಿದೆ. ಕೃಷಿ ಪರಿಕರಗಳ ಬೆಲೆ ಹೆಚ್ಚಾಗಿದ್ದು, ಪೈಪುಗಳನ್ನು ಖರೀದಿಸಲು ರೈತರು ಹೆಣಗಾಡುವ ಸ್ಥಿತಿ ಇದೆ. ಇವರ ಸಂಕಷ್ಟವನ್ನು ಆಲಿಸುವವರು ಯಾರು’ ಎಂದು ಪ್ರಶ್ನಿಸಿದರು.
’ಯುವ ಸಮೂಹಕ್ಕೆ ಕಾಂಗ್ರೆಸ್ ಒತ್ತು ನೀಡುತ್ತಿದೆ. ಚುನಾವಣೆಯಲ್ಲಿ ಯುವ ಸಮೂಹಕ್ಕೆ ಶೇ ೩೫ರಷ್ಟು ಮೀಸಲಾತಿ ಕಲ್ಪಿಸುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಯುವ ನಾಯಕರಿಗೆ ಮನ್ನಣೆ ಸಿಗಲಿದೆ’ ಎಂದು ಹೇಳಿದರು.