May 5, 2024

Chitradurga hoysala

Kannada news portal

ಹೊಳಲ್ಕೆರೆ ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ರೂ.276 ಕೋಟಿ ಅನುದಾನ ಮಂಜೂರು: ಶಾಸಕ ಎಂ.ಚಂದ್ರಪ್ಪ

1 min read

ಚಿತ್ರದುರ್ಗ,ಮೇ.28:
ಜಲಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹೊಳಲ್ಕೆರೆ ತಾಲ್ಲೂಕಿನ 300ಕ್ಕೂ ಹೆಚ್ಚು ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಯೋಜನೆಗಾಗಿ ರೂ.276 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಹೊಳಲ್ಕೆರೆ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹೊಳಲ್ಕೆರೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿರು.
 ಹೊಳಲ್ಕೆರೆ ತಾಲ್ಲೂಕಿನ 300ಕ್ಕೂ ಹೆಚ್ಚು ಗ್ರಾಮೀಣ ಜನ ವಸತಿ ಪ್ರದೇಶಗಳು ಸೇರಿದಂತೆ ಹೊಳಲ್ಕೆರೆ ಪಟ್ಟಣದ ಮನೆ-ಮನೆಗಳಿಗೂ ನಳ ಸಂಪರ್ಕ ಕಲ್ಪಿಸಿ, ಸಮಪರ್ಕ ಕುಡಿಯುವ ನೀರು ಕಲ್ಪಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
  ಹೊಳಲ್ಕೆರೆ ಕ್ಷೇತ್ರಕ್ಕೆ ಇಂತಹ ದೊಡ್ಡಮಟ್ಟದ ಯೋಜನೆ ಇದುವರೆಗೂ ಯಾವುದು ಬಂದಿರಲಿಲ್ಲ. ಹೊಳಲ್ಕೆರೆ ತಾಲ್ಲೂಕು ಮಲೆನಾಡು ಭಾಗದ ವ್ಯಾಪ್ತಿಗೆ ಸೇರಿದ್ದರೂ ಕುಡಿಯುವ ನೀರಿನ ಅಭಾವ ಬಹುತೇಕ ಗ್ರಾಮಗಳಲ್ಲಿದೆ. ಅಂತರ್ಜಲವೂ ಬತ್ತಿ ಹೋಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ಅಡಿಕೆ ತೋಟಗಳು ಹೆಚ್ಚಾಗಿವೆ. ತಾಲ್ಲೂಕಿನ ಜನರಿಗೆ ಕುಡಿಯವ ನೀರಿನ ಸಮಸ್ಯೆಯ ಜೊತೆಗೆ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹಾಗಾಗಿ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಗಮನಿಸಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.
 ಒಂದು ವರ್ಷ ಮೂರು ತಿಂಗಳಿಂದ ವಾಣಿವಿಲಾಸ ಸಾಗರದಿಂದ ನೀರು ತರಲು ನೀರಾವರಿ ಇಲಾಖೆಯಿಂದ 0.536 ಟಿಎಂಸಿ ನೀರು ಪಡೆಯಲಾಗಿದೆ. 11 ಇಲಾಖೆಗಳಿಂದ ಅನುಮತಿ ಪಡೆದು ಕಳೆದ ಒಂದು ವರ್ಷದಿಂದ ಎಲ್ಲಾ ಇಲಾಖೆಗಳ ಅನುಮತಿ ಪಡೆದು ಸರ್ಕಾರ ಯೋಜನೆ ಮಂಜೂರು ಮಾಡಿದೆ ಎಂದರು.
 ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ನಬಾರ್ಡ್ ನಿಂದ ಅನುದಾನ ಪಡೆದು ಈ ಯೋಜನೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯು ಕ್ಷೇತ್ರಕ್ಕೆ ಮಹತ್ವಪೂರ್ಣ ಯೋಜನೆಯಾಗಿದ್ದು, ಈ ಯೋಜನೆ ಪೂರ್ಣಗೊಳಿಸಲು  24 ತಿಂಗಳು ಅವಧಿ ನಿಗಧಿಪಡಿಸಲಾಗಿದ್ದು, ಯಾವುದೇ ಅನುದಾನದ ಕೊರತೆ ಉಂಟಾಗುವುದಿಲ್ಲ. ಈ ಯೋಜನೆಯನ್ನು ಬಳಸಿಕೊಂಡು ಹೊಳಲ್ಕೆರೆ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯಿಂದ 2051 ರವರೆಗೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. 2022 ಆಗಸ್ಟ್ 15 ರೊಳಗೆ ಈ ಯೋಜನೆಯಡಿ ಕ್ಷೇತ್ರದ ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
=======

About The Author

Leave a Reply

Your email address will not be published. Required fields are marked *