April 27, 2024

Chitradurga hoysala

Kannada news portal

ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದರು.

1 min read

ಚಿತ್ರದುರ್ಗ: ಅಗತ್ಯ ವಸ್ತುಗಳ ಬೆಲೆ ಏರಿಸಿ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರಗಳು ದೊಡ್ಡಪ್ರಮಾಣದಲ್ಲಿ ಡಕಾಯಿತಿ ನಡೆಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊರೋನಾ ಒಂದು ಮತ್ತು ಎರಡನೆ ಹಂತದ ಅಲೆಯಲ್ಲಿ ಸಮರ್ಪಕವಾಗಿ ಆಕ್ಸಿಜನ್, ವೆಂಟಿಲೇಟರ್, ಬೆಡ್ ಒದಗಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಹೊಣೆಗೇಡಿತನದಿಂದ ೫೮೫ ಮಂದಿ ಬಲಿಯಾಗಿದ್ದಾರೆ. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮೊರೆ ಹೋಗಿ ರಾಜ್ಯ ಸರ್ಕಾರ ಕೇಳಿದಷ್ಟು ಆಕ್ಸಿಜನ್ ಇನ್ನಿತರೆ ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಆಗುವುದಿಲ್ಲ ಎಂದು ಹೇಳಿದಾಗ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಆಕ್ಸಿಜನ್ ಕೊರತೆಯೆ ಸಾವು-ನೋವಿನ ಸಂಖ್ಯೆ ಹೆಚ್ಚಳಕ್ಕೆ ಮೂಲ ಕಾರಣ ಎಂದು ಆಪಾದಿಸಿದರು.
ಕೊರೋನಾ ಎರಡನೆ ಅಲೆಯಲ್ಲಿ ರೆಮ್‌ಡೆಸಿವರ್ ಪೂರೈಸಿಲ್ಲ. ಜಿಲ್ಲೆಯಲ್ಲಿ ೧೧೬ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಆಗಸ್ಟ್ ಇಲ್ಲವೆ ನವೆಂಬರ್‌ನಲ್ಲಿ ಕೊರೋನಾ ಮೂರನೆ ಅಲೆ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ. ದೇಶದ ೧೪೦ ಕೋಟಿ ಜನಸಂಖ್ಯೆಯಲ್ಲಿ ನೂರು ಕೋಟಿ ಮಂದಿ ಲಸಿಕೆಗೆ ಅರ್ಹರಿದ್ದಾರೆ. ಇದುವರೆವಿಗೂ ಶೇ.೬ ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಇನ್ನು ಶೇ.೯೪ ರಷ್ಟು ಜನರಿಗೆ ಲಸಿಕೆ ನೀಡಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹದಿಮೂರು ಲಕ್ಷ ಜನ ಲಸಿಕೆಗೆ ಅರ್ಹರಿದ್ದು, ಶೇ.೯ ರಷ್ಟು ಲಸಿಕೆ ನೀಡಲಾಗಿದೆ. ಇನ್ನು ಶೇ.೯೧ ರಷ್ಟು ಲಸಿಕೆ ನೀಡಬೇಕಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಮೋದಿ ೧೯೫ ರಾಷ್ಟçಗಳಿಗೆ ಲಸಿಕೆ ರವಾನಿಸಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಬೆಲೆಯನ್ನು ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವುದೇ ಸಾಧನೆ ಎಂದು ಟೀಕಿಸಿದರು.
ಯು.ಪಿ.ಎ.ಸರ್ಕಾರದಲ್ಲಿ ಅಡುಗೆ ಅನಿಲದ ಬೆಲೆ ಕೇವಲ ೩೫೦ ರೂ.ಗಳಷ್ಟಿತ್ತು. ಈಗ ಎಂಟು ನೂರು ರೂ.ಗೆ ಏರಿದೆ. ಬಡವರು, ಮಧ್ಯಮ ವರ್ಗದವರು ಬದುಕಲು ಆಗುತ್ತಿಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿ.ನಾಯಕರುಗಳು ನಿಸ್ಸೀಮರು. ಅವೈಜ್ಞಾನಿಕ ಜಿ.ಎಸ್.ಟಿ, ಐದು ನೂರು ಹಾಗೂ ಒಂದು ಸಾವಿರ ರೂ.ಮುಖ ಬೆಲೆಯ ನೋಟುಗಳ ರದ್ದು, ಕೋವಿಡ್ ಪರಿಹಾರವಾಗಿ ಘೋಷಿಸಿರುವ ವಿಶೇಷ ಪ್ಯಾಕೇಜ್ ಹಣ ಹಂಚಿಕೆಯಲ್ಲಿ ತಾರತಮ್ಯ ಹೀಗೆ ದೇಶದ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರೆ ಪಾಠ ಕಲಿಸಲಿದ್ದಾರೆ. ಕೃಷಿ ಕಾಯಿದೆ ವಿರೋಧಿ ಕಾನೂನು ಜಾರಿಗೆ ತಂದಿರುವುದನ್ನು ವಿರೋಧಿಸಿ ದೆಹಲಿಯಲ್ಲಿ
ಸತ್ಯಾಗ್ರಹ ಮಾಡುತ್ತಿರುವ ರೈತರ ಸಮಸ್ಯೆ ಆಲಿಸುವಷ್ಟು ಕಾಳಜಿಯಿಲ್ಲದೆ ಪ್ರಧಾನಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂದು ಎಸ್.ಆರ್.ಪಾಟೀಲ್ ಆಪಾದಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ೫೨೬ ಕೋಟಿ ರೂ.ಗೆ ಒಂದರAತೆ ೩೬ ರಫೇಲ್ ವಿಮಾನ ಖರೀಧಿಸಿತ್ತು. ಅದನ್ನು ರದ್ದುಪಡಿಸಿದ ಈಗಿನ ಬಿಜೆಪಿ.ಸರ್ಕಾರ ಹಗರಣ ನಡೆಸಿರುವುದ ತನಿಖೆಗೆ ಸಂಸತ್‌ನಲ್ಲಿ ಜಂಟಿ ಸದನ ಸಮಿತಿ ರಚನೆಗೆ ಒತ್ತಾಯಿಸಿದರೂ ಕ್ಯಾರೆ ಎನ್ನಲಿಲ್ಲ. ಈ ಸಂಬAಧ ಫ್ರಾನ್ಸ್ನಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುತ್ತಿದೆ. ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಎರಡು ಸಾವಿರ ಕೋಟಿ ರೂ. ಕಿಕ್‌ಬ್ಯಾಕ್ ನಡೆದಿದೆ ಎಂದು ಬಿಜೆಪಿ.ಯವರೆ ಆದ ಹೆಚ್.ವಿಶ್ವನಾಥ್ ಹೇಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸುತ್ತಿರುವ ಬಿಜೆಪಿ.ಗೆ ಮುಂದೆ ಉಳಿಗಾಲವಿಲ್ಲ ಎಂದು ಕಿಡಿ ಕಾರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ,
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆ.ಪಿ.ಸಿ.ಸಿ.ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಮಾಜಿ ಸಚಿವ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೆ.ಪಿ.ಸಿ.ಸಿ.ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತನಂದಿನಿಗೌಡ, ಶಿವುಯಾದವ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮಕಾಂತ್ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

About The Author

Leave a Reply

Your email address will not be published. Required fields are marked *