May 17, 2024

Chitradurga hoysala

Kannada news portal

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಮಾಡದ ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ತರಾಟೆ

1 min read

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಮಾಡದ ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ತರಾಟೆ

ಅನುದಾನ ನಿಗಧಿತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಸೂಚನೆ

ಚಿತ್ರದುರ್ಗ,ಜುಲೈ06:
ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ನಿಗಧಿತ ಉದ್ದೇಶಕ್ಕೆ ಹಾಗೂ ಸಕಾಲದಲ್ಲಿ ಬಳಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ವೆಚ್ಚ ಮಾಡದ ಅಧಿಕಾರಿಗಳಿಗೆ ಯುವ ಸಬಲೀಕರಣ, ಕ್ರೀಡೆ, ಯೋಜನೆ ಹಾಗೂ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಾ.ನಾರಾಯಣಗೌಡ ತರಾಟೆ ತೆಗೆದುಕೊಂಡರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ, ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿ ಅನುದಾನದ ಬಳಕೆ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ, ಬಯಲುಸೀಮೆ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಮತ್ತು ಬೆಳೆವಿಮೆ ಪರಿಹಾರ ಹಣ ಪಾವತಿಯ ಬಗ್ಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಅನುದಾನ ನೀಡಿದರೂ ಸರಿಯಾದ ರೀತಿಯಲ್ಲಿ ನಿರ್ಮಾಣ ಏಜೆನ್ಸಿಯವರು ಕಾರ್ಯನಿರ್ವಹಿಸುತ್ತಿಲ್ಲ. ನಿರ್ಮಾಣ ಏಜೆನ್ಸಿಯವರ ವಿಳಂಬದಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದ ಸಚಿವರು ಕೆಆರ್‍ಐಡಿಎಲ್, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮದ ಅಧಿಕಾರಿಗಳ ವಿರುದ್ಧ ಅಸಮಾದಾನ ಹೊರಹಾಕಿದರು.
ಜಿಲ್ಲೆಯಲ್ಲಿ ಒಟ್ಟು ರೂ.24.94 ಕೋಟಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವಿದ್ದು, ದಾಖಲೆ ಪ್ರಕಾರ ಅನುದಾನದ ಬಳಕೆ ಶೇ.1 ರಷ್ಟೂ ಖರ್ಚಾಗಿಲ್ಲ. ಅನುದಾನ ವೆಚ್ಚವಾಗದೆ ಉಳಿದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಜಾಗೃತರಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಸಂಬಂಧಿಸಿದಂತೆ ಎಲ್ಲ ಅನುದಾನಕ್ಕೂ ಕ್ರಿಯಾಯೋಜನೆ ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದಾಖಲೆ ಪ್ರಕಾರ ಅನುದಾನದ ಬಳಕೆ ಶೇ.1ರಷ್ಟು ಖರ್ಚಾಗಿಲ್ಲ. ಕಾಮಗಾರಿ ಮುಗಿಸಿ, ಅಪ್ರೂವ್ ಮಾಡದೆ ಅಧಿಕಾರಿಗಳು ನಿರ್ಲಕ್ಷೆ ತೋರಿದ್ದರಿಂದ ಈ ಸಮಸ್ಯೆಗೆ ಕಾರಣವಾಗಿದೆ. ಶಾಸಕರು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು. ಸರ್ಕಾರ ನೀಡಿರುವ ಅನುದಾನ ಖರ್ಚು ಆಗದಿದ್ದರೆ ಸರ್ಕಾರ ಅನುದಾನವನ್ನು ವಾಪಾಸ್ಸು ಪಡೆಯಲಿದೆ ಎಂದು ತಿಳಿಸಿದರು.
ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಮಾತನಾಡಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಸಂಬಂಧಿಸಿದಂತೆ ನಿಯಾವಳಿಗಳನ್ನು ಸರಳೀಕರಣ ಮಾಡುವ ಅಗತ್ಯವಿದೆ. ಅನುದಾನ ಮಂಜೂರಾತಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಾಣವಾಗುವ ಕೆಲಸಗಳು ಶೀಘ್ರದಲ್ಲಿ ಪ್ರಾರಂಭವಾಗಬೇಕು. ಆದರೆ ಈ ಅನುದಾನ ಮಂಜೂರಾಗಲು ವಿವಿಧ ಇಲಾಖೆಗಳಿಗೆ ತಿಂಗಳಗಟ್ಟಲೆ ವಿಳಂಬ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು ಶಾಸಕರ ಅನುದಾನ ಬಳಕೆ ಕುರಿತು ನಿಯಮಗಳನ್ನು ಸರಳೀಕರಣ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.
ಕಾಮಗಾರಿಯಲ್ಲಿ ಲೋಪವಾದರೆ ಕ್ರಮ: ಅಧಿಕಾರಿಗಳು ಅನುದಾನ ಬಿಡುಗಡೆಯಲ್ಲಿ ಅಥವಾ ಕಾಮಗಾರಿಯಲ್ಲಿ ಲೋಪವೆಸಗಿದರೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಾಮಾನ್ಯವಾಗಿ ಯೋಜನಾ ಇಲಾಖೆ ಮುಖ್ಯಮಂತ್ರಿಗಳ ಬಳಿ ಇರುತ್ತಿತ್ತು. ಸಮಯದ ಅಭಾವದಿಂದ ಸರಿಯಾಗಿ ಎಲ್ಲವನ್ನು ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಮುಖ್ಯಮಂತ್ರಿಗಳು ಇಲಾಖೆಯನ್ನು ನನಗೆ ನೀಡಿ ಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಪ್ರತಿ ಜಿಲ್ಲೆಗೆ ತೆರಳಿ ಪರಿಶೀಲನೆ ನಡೆಸುತ್ತೇನೆ. ಕೂಲಂಕುಷವಾಗಿ ಎಲ್ಲವನ್ನು ಗಮನಿಸಿ ಅನುದಾನ ಬಿಡುಗಡೆಗೂ ಹಾಗೂ ಅನುದಾನ ಬಳಕೆಯನ್ನು ಗಮನಿಸುತ್ತೇನೆ ಎಂದು ಸಚಿವರು ತಿಳಿಸಿದರು.

About The Author

Leave a Reply

Your email address will not be published. Required fields are marked *