April 26, 2024

Chitradurga hoysala

Kannada news portal

*ದವಸ ಸಮರ್ಪಣೆ* (ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಕಡೂರು ಎ ಪಿ ಎಂ ಸಿ ಅಧ್ಯಕ್ಷ ರವಿ ಮುಂದಾಳತ್ವದಲ್ಲಿ ಸಂಗ್ರಹ )

1 min read

*ದವಸ ಸಮರ್ಪಣೆ*

ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಕಡೂರು ಎ ಪಿ ಎಂ ಸಿ ಅಧ್ಯಕ್ಷ ರವಿ ಮುಂದಾಳತ್ವದಲ್ಲಿ ಸಂಗ್ರಹ

ಹೊಸದುರ್ಗ/ಸಾಣೇಹಳ್ಳಿ: ಇಲ್ಲಿನ ಶ್ರೀ ಗುರು ಬಸವ ಮಹಾಮನೆಯ ಮುಂಭಾಗದಲ್ಲಿ ಅನೌಪಚಾರಿಕವಾಗಿ ಆಯೋಜನೆಗೊಂಡಿದ್ದ ಕಡೂರು ತಾಲ್ಲೂಕು ದವಸ ಸಮರ್ಪಣಾ ಕಾರ್ಯಕ್ರಮ’ದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕಳೆದ ಎರಡು ವರ್ಷಗಳಿಂದ ಕೋವಿಡ್ ಶಿಕ್ಷಣ ಕ್ಷೇತ್ರವನ್ನು ಬಹುವಾಗಿ ಕಾಡುತ್ತಿದೆ. ಶಿಕ್ಷಣಕ್ಷೇತ್ರ ಜೀವಂತ ಮಕ್ಕಳೊಡನೆ ವ್ಯವಹರಿಸುವ ಕ್ಷೇತ್ರ. ಕೈಗಾರಿಕೆಗಳಂತೆ ಯಂತ್ರಗಳನ್ನು ಬೇಕಾದಾಗ ಶುರು ಮಾಡಿ ಬೇಡವಾದಾಗ ನಿಲ್ಲಿಸಲಾಗುವುದಿಲ್ಲ. ಸರಿಯಾದ ಶಿಕ್ಷಣ ಸಿಗದೆ ಮಕ್ಕಳು, ಪೋಷಕರು ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಕೆಳ ಮತ್ತು ಮದ್ಯಮ ವರ್ಗದ ಮಕ್ಕಳಿಗೆ ಅತ್ತ ಆನ್‍ಲೈನ್ ಶಿಕ್ಷಣವೂ ಸಿಗದೆ, ಇತ್ತ ಆಫ್‍ಲೈನ್ ಶಿಕ್ಷಣವೂ ಇಲ್ಲದೆ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗಿದೆ. ಇಂಥ ಸಂದರ್ಭದಲ್ಲಿ ಸಾಣೇಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ 5 ರಿಂದ 10 ನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿ ತರಗತಿಯಲ್ಲಿನ 30 ವಿದ್ಯಾರ್ಥಿಗಳಂತೆ 180 ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿ-ಶಿಕ್ಷಣ ನೀಡಬೇಕೆನ್ನುವ ಶ್ರೀಮಠದ ಸಂಕಲ್ಪವನ್ನು ಪ್ರಕಟಿಸಿದಾಗ ಸಾಕಷ್ಟು ಜನ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ.

ಅದರಂತೆ ಕಡೂರಿನ ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಕಡೂರು ಎ ಪಿ ಎಂ ಸಿ ಅಧ್ಯಕ್ಷ ರವಿ ಮುಂದಾಳತ್ವದಲ್ಲಿ ದವಸ (230 ಪಾಕೀಟ್ ಅಕ್ಕಿ, 35 ಪಾಕೀಟ್ ತೊಗರಿಬೇಳೆ, 360 ಲೀಟರ್ ಎಣ್ಣೆ, 5 ಕ್ವಿಂಟಲ್ ಸಕ್ಕರೆ) ಮತ್ತು ಎರಡು ಲಕ್ಷದಷ್ಟು ಹಣ ಸಂಗ್ರಹಿಸಿ ಸಮರ್ಪಿಸುತ್ತಿದ್ದಾರೆ. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತ ಹೋದರೆ ಹಣ ತಾನಾಗಿಯೇ ಹರಿದು ಬರುತ್ತದೆ ಎನ್ನುವುದಕ್ಕೆ ಸಾಣೇಹಳ್ಳಿಯ ಅಭಿವೃದ್ಧಿಯೇ ಸಾಕ್ಷಿ. `ಬೇಡಲಾಗದು ಜಂಗಮ ಬೇಡಿಸಿಕೊಳ್ಳಲಾಗದು ಭಕ್ತ’ ಎನ್ನುವಂತೆ ನಮ್ಮ ಮಠದ ಭಕ್ತರು, ಅನುಯಾಯಿಗಳು ಜಾತ್ಯತೀತವಾಗಿ ನಡೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ನಾವು 70 ರ ವಯಸ್ಸಿನಲ್ಲೂ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಮಠದ ಜೊತೆ ಭಕ್ತರು ಇರುವಂತೆ; ಭಕ್ತರ ಜೊತೆ ಮಠವೂ ಇರುತ್ತದೆ. ನಾವು ಇಂದಿನ ಈ ಅನೌಪಚಾರಿಕ ಸಮಾರಂಭವನ್ನಾಗಲಿ, ಇಷ್ಟು ದೊಡ್ಡ ಪ್ರಮಾಣದ ದಾಸೋಹವನ್ನಾಗಲಿ ನಿರೀಕ್ಷಿಸಿರಲಿಲ್ಲ. ಕಡೂರಿನ ಎಲ್ಲ ವರ್ಗದವರು ಜಾತ್ಯತೀತವಾಗಿ, ಸ್ವಯಂ ಪ್ರೇರಿತರಾಗಿ ದವಸ-ಹಣ ಸಂಗ್ರಹಿಸಿಕೊಂಡು ಶ್ರೀಮಠಕ್ಕೆ ಸಮರ್ಪಿಸುತ್ತಿದ್ದಾರೆ. ರಾಜ್ಯಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಡಿ ನೂರಾರು ಶಾಲಾ-ಕಾಲೇಜುಗಳು ನಡೆಯುತ್ತಿವೆ. ಅವೆಲ್ಲವೂ ಬಹುತೇಕ ಕನ್ನಡ ಮಾಧ್ಯಮದವೇ ಆಗಿವೆ. ಸಾಣೇಹಳ್ಳಿಗೆ ನೀಡಿರುವಂತೆ ಆಯಾ ಭಾಗದ ಶಿಕ್ಷಣಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು, ರಾಜಕಾರಣಿಗಳು, ಸಾರ್ವಜನಿರು ಆ ಶಾಲೆಗಳ ಅಭಿವೃದ್ಧಿಗೂ ಉದಾರವಾಗಿ ದೇಣಿಗೆ ನೀಡಬೇಕೆಂದು ಕರೆಕೊಟ್ಟರು.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ ದಾಸೋಹ ಮಾಡುವ ಮನಸ್ಥಿತಿ ಬಹುತೇಕರಿಗಿದೆ. ಅನ್ನ ದಾಸೋಹಕ್ಕೆ ಜಾತ್ಯತೀತವಾಗಿ ನಮ್ಮ ಕ್ಷೇತ್ರದ ಜನ ಸದಾ ಮುಂದು. ನನಗೆ ದೇವರು ಎಲ್ಲ ಕೊಟ್ಟಿದ್ದಾನೆ. ಅದನ್ನು ವಾಪಾಸ್ ಮತದಾರರಿಗೆ ಕೊಡುವುದು ನನ್ನ ಧರ್ಮ. ಅದರಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಕೊಟ್ಟಿದ್ದನ್ನು ಹೇಳಬಾರದು ಎನ್ನುವ ನಂಬಿಕೆ ನನ್ನದು. ನೂರು ಜನ ಸೇರಿದರೆ ಒಬ್ಬನನ್ನು ಬದುಕಿಸಬಹುದೇ ಹೊರತು; ಶಾಸಕ ಒಬ್ಬರು ಏನೂ ಮಾಡಲು ಸಾಧ್ಯವಿಲ್ಲ. ತರಳಬಾಳು ಮಠ ಎಲ್ಲ ಸಮಾಜ, ಧರ್ಮದವರನ್ನು ಒಳಗೊಂಡ ಶಾಂತಿಯ ತೋಟ. ಪೂಜ್ಯರ ಯಾವುದೇ ಆದೇಶಕ್ಕೆ ನಾನು ತಲೆಬಾಗುವೆ. ನನ್ನ ಕೈಯಲ್ಲಿ ಹಾಕಿರುವ ಬಂಗಾರದ ಚೈನು, ಉಂಗುರಗಳನ್ನು ನನ್ನ ಕ್ಷೇತ್ರ ಜನ ಪ್ರೀತಿಯಿಂದ ಕೊಟ್ಟದ್ದು. ಇದನ್ನು ಜನರಿಗೆ ಅವಶ್ಯಕತೆ ಇದ್ದಾಗ ಯಾವುದೇ ಮೂಲಾಜಿಲ್ಲದೆ ವಾಪಸ್ಸು ಕೊಡುವೆ. ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಕೈಗೆ ಹಾಕಿರುವ ಬಂಗಾರದ ಬಗ್ಗೆ ಕೇಳಿದರು. ನಾನಾಗ ಜನಕೊಟ್ಟದ್ದು, ಈ ಬಗ್ಗೆ ನನಗೆ ಹೆಮ್ಮೆಯಿದೆ. ನೀವು ನಮ್ಮ ಕ್ಷೇತ್ರಕ್ಕೆ ಬನ್ನಿ; ನಿಮ್ಮ ಕೈಗೂ ಬಂಗಾರ ಹಾಕಿಸುವೆ. ಅದರೆ ಅದನ್ನು ನೀವು ಎಲ್ಲ ಕಡೆ ದೈರ್ಯವಾಗಿ ಹೇಳಿಕೊಳ್ಳಬೇಕು ಅಂದೆ. ಅದಕ್ಕವರು ಅದು ನನ್ನಿಂದ ಆಗುವುದಿಲ್ಲ ಎಂದರು. ಬಹಳ ಜನ ನನ್ನನ್ನು ಬಹಳ ದೊಡ್ಡ ಶ್ರೀಮಂತ ಎಂದು ಭಾವಿಸಿದ್ದಾರೆ. ನಿಜ ಆದರೆ ಹಣದಿಂದಲ್ಲ; ಅಭಿಮಾನದಿಂದ ಎಂದರು.
ಕಡೂರು ಎಪಿಎಂಸಿ ಅಧ್ಯಕ್ಷ ರವಿ, ಶಿವಕುಮಾರ್ ಒಡೆಯರ್, ಪ್ರಕಾಶ್, ಚೆನ್ನಪ್ಪ, ಉಮೇಶ್, ರಾಜಾನಾಯ್ಕ್, ಲಕ್ಷ್ಮಣ್, ದೇವಾನಂದ, ಬಾಬು, ಎ ಸಿ ಚಂದ್ರಪ್ಪ, ಸಿದ್ದಪ್ಪ, ಮಲ್ಲಿಕಾರ್ಜುನ, ರೇವಣ್ಣಯ್ಯ, ಸುದರ್ಶನ್, ಚಂದ್ರಶೇಖರಪ್ಪ, ಶಿವಕುಮಾರ್, ಯೋಗರಾಜ್ ಮುಂತಾದವರು ಮಾತನಾಡಿದರು. ಅಧ್ಯಾಪಕ ವಿರೂಪಾಕ್ಷಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಕಡೂರು ತಾಲ್ಲೂಕಿನ ನೂರಾರು ಜನ, ಎಲ್ಲ ಸಮಾಜದ ಮುಖಂಡರು ಭಾಗವಹಿಸಿದ್ದರು.
_________________

About The Author

Leave a Reply

Your email address will not be published. Required fields are marked *