April 29, 2024

Chitradurga hoysala

Kannada news portal

ಮೀಸಲಾತಿಯನ್ನು ಪರಿಪಾಲಿಸುವುದು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ

1 min read

ಮೀಸಲಾತಿಯನ್ನು ಪರಿಪಾಲಿಸುವುದು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ

ಇಡಿ ದೇಶವೇ ಸಂಭ್ರಮದಿಂದ ಸ್ವತಂತ್ರೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರದ ಪರಿಕಲ್ಪನೆಯನ್ನು ಮತ್ತು ಅದರ ಅಳವಡಿಕೆಗೆ ಬೇಕಾಗುವ ಮನೋಭಾವನೆ ಹಾಗೂ ಸಾಂವಿಧಾನಿಕ ಹಕ್ಕು ಹಾಗು ಜವಾಬ್ದಾರಿಗಳನ್ನು ಪ್ರತಿಯೊಬ್ಬರಲ್ಲಿ ಬೆಳೆಸಬೇಕಾದದ್ದು ಶಿಕ್ಷಣದ ಆದ್ಯ ಕರ್ತವ್ಯ. ನಮ್ಮ ದೇಶದ ಅನೇಕ ಐಐಟಿ(ಭಾರತೀಯ ತಂತ್ರಜ್ಞಾನ ಸಂಸ್ಥೆ)ಗಳು ಪ್ರಪಂಚದ ಅಗ್ರಗಣ್ಯ ನೂರು ವಿಶ್ವವಿದ್ಯಾಲಯಗಳಲ್ಲಿ ಸ್ಥಾನವನ್ನು ಪಡೆದಿದೆ. ಹಾಗೆಯೇ ಕೆಲವು ನಮ್ಮ ದೇಶದ ಎನ್‍ಐಆರ್‍ಎಫ್(ರಾಷ್ಟ್ರೀಯ ಶ್ರೇಯಾಂಕ ಚೌಕಟ್ಟು ಸಂಸ್ಥೆ)ನ ಟಾಪ್ 10ರಲ್ಲಿ ಸ್ಥಾನವನ್ನು ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪರಿಣಾಮಕಾರಿ ಬೋಧನೆ, ಉತ್ಕøಷ್ಟ ತರಬೇತಿ, ಗುಣಮಟ್ಟದ ಸಂಶೋಧನೆ, ಅತ್ಯುತ್ತಮ ಸಂಪನ್ಮೂಲ ಮತ್ತು ಉತ್ತಮ ಜ್ಞಾನಕ್ಕೆ ಹೆಸರುವಾಸಿಯಾಗಿರುವುದು ಶ್ಲಾಘನೀಯವಾದುದು. ಆದರೆ ಇಂತಹ ಸಂಸ್ಥೆಗಳಲ್ಲಿ ತಳಸಮುದಾಯದವರನ್ನು, ದೀನದಲಿತರನ್ನು ಮತ್ತು ಬಡವರನ್ನು ಪರೋಕ್ಷವಾಗಿ ಹೊರಗಿಟ್ಟಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಅರಿಯಬೇಕಾದ ಸಂಗತಿ. ಸ್ವಾತಂತ್ರ್ಯ ಬಂದು 75 ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಪರಿಶಿಷ್ಟರನ್ನು ಮತ್ತು ಆದಿವಾಸಿಗಳನ್ನು ತುಚ್ಛವಾಗಿ ಕಾಣುವುದು ಶೋಚನೀಯವಾದುದು. ಇಂತಹ ಸಂಸ್ಥೆಗಳಲ್ಲಿ ಕಾರ್ಯಾತ್ಮಕ ಎಸ್ಸಿಎಸ್ಟಿ(ಪರಿಶಿಷ್ಟ ಜಾತಿ/ಪಂಗಡ) ಅಭಿವೃದ್ದಿ ಕೋಶಗಳಿಲ್ಲದೆ ಇರುವುದು ಕೂಡ ವಿಪರ್ಯಾಸ. ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಬೇಕಾದ ಇಂತಹ ಅತ್ಯುನ್ನತ ಸಂಸ್ಥೆಗಳೇ ಪಾಲಿಸದಿರುವುದು ವಿಷಾದನಿಯ. ಪ್ರಾಥಮಿಕ ಹಂತದಲ್ಲೇ ಹೊರಗುಳಿಯುವ ಮಕ್ಕಳನ್ನು, ಪುನಃ ಶಾಲೆಗೆ ಕರೆತರುವ ಕೆಲಸ ಮಾಡುತ್ತಿರುವಾಗ ಇದಕ್ಕೆ ತದ್ವಿರುದ್ಧವಾದ ಅಂದರೆ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡುತ್ತಿರುವುದನ್ನು ಗಮನಿಸಿದರೆ ಖಂಡಿತವಾಗಿಯೂ ಆಶ್ಚರ್ಯವಾಗುವುದರಲ್ಲಿ ಸಂದೇಹವೇ ಇಲ್ಲ.
ದೇಶದ ಐಐಟಿಗಳಲ್ಲಿ ಒಟ್ಟು 5945 ಬೋಧಕರಿದ್ದಾರೆ. ಇದರಲ್ಲಿ ಕೇವಲ 0.6% ರಷ್ಟು ಮಾತ್ರ ಪರಿಶಿಷ್ಟ ವರ್ಗದವರು, 3.1% ರಷ್ಟು ಮಾತ್ರ ಪರಿಶಿಷ್ಟ ಜಾತಿಯವರು ಮತ್ತು 8.1%ರಷ್ಟು ಮಾತ್ರ ಇತರೆ ಹಿಂದುಳಿದ ವರ್ಗದವರಿದ್ದಾರೆ. ಐಐಎಂ(ಭಾರತೀಯ ಆಡಳಿತ/ನಿರ್ವಹಣೆ ಸಂಸ್ಥೆ)ಗಳಲ್ಲಿ ಕೇವಲ 04% ರಷ್ಟು ಮಾತ್ರ ಪರಿಶಿಷ್ಟ ವರ್ಗದವರು, 2.7% ರಷ್ಟು ಮಾತ್ರ ಪರಿಶಿಷ್ಟ ಜಾತಿಯವರು ಮತ್ತು 6.0%ರಷ್ಟು ಮಾತ್ರ ಇತರೆ ಹಿಂದುಳಿದ ವರ್ಗದವರಿದ್ದಾರೆ. ಇದು ಬೋಧಕರ ಸ್ಥಿತಿಗತಿ. ಇದಕ್ಕಿಂತ ವಿದ್ಯಾರ್ಥಿಗಳ ಸ್ಥಿತಿಗತಿ ಭಿನ್ನವೇನಲ್ಲ. ಏಳು ಐಐಟಿ(ಭಾರತೀಯ ತಂತ್ರಜ್ಞಾನ ಸಂಸ್ಥೆ)ಗಳಲ್ಲಿ ಕಳೆದ ಐದು ವರ್ಷಗಳಲ್ಲಿ 60% ವಿದ್ಯಾರ್ಥಿಗಳು ಮೀಸಲಿಟ್ಟ ಜಾತಿಗಳಲ್ಲೇ ಹೊರಗುಳಿದಿರುವ ಅಂಶ ಬಹಿರಂಗವಾಗಿದೆ. ಲೋಕಸಭೆಯ ದತ್ತಾಂಶದ ಪ್ರಕಾರ ಸ್ನಾತಕಪೂರ್ವ ವಿದ್ಯಾರ್ಥಿಗಳು ಮೀಸಲಿಟ್ಟ ಜಾತಿಗಳಲ್ಲಿ ಹೊರಗುಳಿದಿರುವುದನ್ನು ಕಾಣಬಹುದು.
ಕೋಷ್ಟಕ-1. ಐಐಟಿಗಳಲ್ಲಿ ಹೊರಗುಳಿದಿರುವ ವಿದ್ಯಾರ್ಥಿಗಳ ಸಂಖ್ಯೆ
ಐಐಟಿ
ಹೊರಗುಳಿದಿರುವ ವಿದ್ಯಾರ್ಥಿಗಳ ಸಂಖ್ಯೆ.
ಮೀಸಲಿಟ್ಟ ಜಾತಿಗಳ ಶೇಕಡಾವಾರು(%)

ಒಟ್ಟು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ವರ್ಗದವರಿಗೆ 50% ಎಸ್ಸಿಎಸ್ಟಿ(ಪರಿಶಿಷ್ಟ ಜಾತಿ/ಪಂಗಡ)ಯವರಿಗೆ 23% ಸೀಟುಗಳು ಹಂಚಿಕೆಯಾಗಿವೆ. ಆದರೆ ಮೇಲಿನ ಕೋಷ್ಟಕ-1ನ್ನು ಗಮನಿಸಿದರೆ ಎಷ್ಟರಮಟ್ಟಿಗೆ ಮೀಸಲಿಟ್ಟ ಜಾತಿಗಳಿಗೆ ಅನ್ಯಾಯವಾಗಿದೆ ಎಂಬುದನ್ನು ಮನಗಾಣಬಹುದು. ಸರ್ವರನ್ನು ಒಳಗೊಂಡ ಗುಂಪೇ ಸಮಾಜ. ಆದರೆ ಇಲ್ಲಿ ಕೇವಲ ಸಾಮಾನ್ಯ ವರ್ಗದವರ ಬಹುಸಂಖ್ಯೆಯನ್ನು ಕಾಣಬಹುದು. ಪ್ರತಿಯೊಂದು ಜಾತಿ, ವರ್ಗಗಳು, ಪಂಥಗಳು ಅಭಿವೃದ್ಧಿಯಾದಾಗ ಮಾತ್ರ ಸಮಾಜದ ಅಭಿವೃದ್ಧಿಯಾಗುವುದು ಎಂಬುದನ್ನರಿಯದೇ ದೀನದಲಿತರು, ದುರ್ಬಲವರ್ಗದವರನ್ನು, ಆದಿವಾಸಿಗಳನ್ನು ತುಳಿದು ಬೆಳೆಯುವುದು ಅರ್ಥಹೀನ. ಸಮಾನತೆಯನ್ನು ಒದಗಿಸಬೇಕಾದಂತಹ ಇಂತಹ ಸಂಸ್ಥೆಗಳೇ ಅಸಮಾನತೆಯನ್ನು ಆಚರಿಸುತ್ತಿವೆ. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹಿಮ್ಮಡಿಗೊಳಿಸದೇ, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಹೀಗಿದ್ದಾಗ ಇಂತಹ ಸಂಸ್ಥೆಗಳಲ್ಲಿ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವುದು ಎಷ್ಟು ಸರಿ?
ಕೋಷ್ಟಕ-2. 2020-21 ನೇ ಸಾಲಿನ ಪಿಹೆಚ್‍ಡಿ ಪ್ರವೇಶಾತಿ, ಐಐಟಿ, ಖರಗ್‍ಪುರ.

ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ
ಆರ್ಥಿಕವಾಗಿ ದುರ್ಬಲರಾದವರು ಸಾಮಾನ್ಯ ಒಟ್ಟು ಅರ್ಜಿ ಸಲ್ಲಿಸಿದವರು

ಮೇಲಿನ ಕೋಷ್ಟಕ-2ರ ಪ್ರಕಾರ 2020-21ನೇ ಸಾಲಿನಲ್ಲಿ ಪಿಹೆಚ್‍ಡಿ ಪ್ರವೇಶಾತಿಗೆ ಖರಗ್‍ಪುರನ ಐಐಟಿಯಲ್ಲಿ ಕೇವಲ ಶೇ. 2.3% ಪ.ಪ. ಶೇ.12.3% ಪ.ಜಾ. ಹಾಗೂ ಶೇ. 21.9% ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಇದು ಕೂಡ ಸಾಮಾಜಿಕ ನ್ಯಾಯದ ವಿರುದ್ಧವಾದ ಬೆಳವಣಿಗೆಯಾಗಿದೆ.

ಜಾತಿನಿಂದನೆಮಾಡಿ ರಾಜಿನಾಮೆ ನೀಡಿದ ಐಐಟಿಯ ಪ್ರಾಧ್ಯಾಪಕಿಯ ಪ್ರಕರಣ ಇನ್ನೂ ಹಸಿರಿರುವಾಗಲೇ, ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಎಂದೆ ಹೆಸರುವಾಸಿಯಾದ ಐಐಎಮ್, ಮತ್ತು ಐಐಟಿಗಳಲ್ಲಿ ಹಿಂದಿನ ಐದು ವರ್ಷಗಳಲ್ಲಿ ಶೇ.60% ಪ.ಜಾ./ಪ.ಪಂ ವಿದ್ಯಾರ್ಥಿಗಳು ಅಪವ್ಯಯಕ್ಕೊಳಗಾಗಿದ್ದು ಕೆಲವು ಸಂಸ್ಥೆಗಳಲ್ಲಿ ಇದರ ಪ್ರಮಾಣ ಶೇ. 72% ದಷ್ಟಿದೆ. ಅಲ್ಲಿಯ ವಿದ್ಯಾರ್ಥಿಗಳ ಅಭಿಪ್ರಾಯದಂತೆ ಇದು ಜಾತಿಯತೆಯ ಕಿರುಕುಳವಲ್ಲದೇ ಬೇರೆನು ಅಲ್ಲ.ಪರಿಣಾಮಕಾರಿಯಾಗಿ ಪ್ರವೇಶ ಮತ್ತು ಬೋಧಕರ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಷ್ಠಾನಗೊಳಿಸಲು 23ನೇ ಎಪ್ರೀಲ್ 2020ರಂದು ಶಿಕ್ಷಣ ಸಚಿವಾಲಯ ಪ್ರೋ. ವಿ ರಾಮ್ ಗೋಪಾಲ್ ರಾವ್ (ನಿರ್ದೇಶಕ, ಐಐಟಿ ದೆಹಲಿ) ಒಳಗೊಂಡ ಎಂಟು ಜನರ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಐದು ಪುಟಗಳ ವರದಿಯನ್ನು 17ನೇ ಜೂನ್ 2020 ರಂದು ಸಲ್ಲಿಸಿತು. ವಿಷಾದವೆಂದರೆ, ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಮಾರ್ಗಸೂಚಿ ತಿಳಿಸುವ ಬದಲು ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸೆಕ್ಷೆನ್ 4(1) ಐಐಟಿಗಳನ್ನು ಸೇರಿಸಲು ತಿಳಿಸಿತು. ಏಕೆಂದರೆ ಆ ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಪಾಲಿಸುವ ಹಾಗಿಲ್ಲ.
ಡಾ.ಬಿಆರ್.ಅಂಬೇಡ್ಕರ್ ಸಂವಿಧಾನ ಸಭೆಯ ತಮ್ಮ ಕೊನೆಯ ಭಾಷಣದಲ್ಲಿ ಎಚ್ಚರಿಕೆಯನ್ನು ನೀಡಿದ್ದರು. “ಇನ್ನೂ ಎಲ್ಲಿಯವರೆಗೆ ನಾವು ಸಮಾನತೆಯನ್ನು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಅಲ್ಲಗಳೆಯುತ್ತೆವೆ? ನಾವು ಇದನ್ನು ಹೀಗೆಯೆ ಮುಂದುವರೆಸಿದರೆ ನಮ್ಮ ರಾಜಕಿಯ ಪ್ರಜಾಪ್ರಭುತ್ವವನ್ನು ಗಂಡಾಂತರಕ್ಕೆ ತಂದಂತಾಗುತ್ತದೆ. ಹಾಗಾಗಿ ಇದನ್ನು ಆದಷ್ಟು ಬೇಗ ಈ ವಿರೋಧವನ್ನು ತೆಗೆದುಹಾಕಬೇಕಾಗುತ್ತದೆ ಇಲ್ಲದಿದ್ದರೆ ಯಾರು ಅಸಮಾನತೆಯಿಂದ ಬಳಲುತ್ತಾರೋ ಅವರು ರಾಜಕಿಯ ಪ್ರಜಾಪ್ರಭುತ್ವದ ರಚನೆಯನ್ನೇ ನಾಶಮಾಡುತ್ತಾರೆ”.
ಆದ್ದರಿಂದ ಎಲ್ಲಾ ಸರ್ಕಾರಿ ಅರೆಸರ್ಕಾರಿ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಮತ್ತು ಆರ್ಥಿಕತೆಯ ಸ್ವಾವಲಂಬನೆಗೆ ಅನುವು ಮಾಡಿಕೊಟ್ಟು ದೇಶದ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕೆ ವಿನಹ ತೋರಿಕೆಗೆ ವಿಶ್ವಮಾನ್ಯ ಅಗ್ರ ಶಿಕ್ಷಣ ಸಂಸ್ಥೆಗಳೆಂಬ ಅಸಮಾನತೆಯ ಗೂಡುಗಳಾಗಬಾರದು. ಸರ್ಕಾರ ಶೀಘ್ರದಲ್ಲಿ ಪ್ರತಿ ವಿಭಾಗವಾರು ಪ.ಜಾ.ಪ.ಪಂ ಬೋಧಕರ ನೇಮಕಾತಿಯೊಂದಿಗೆ, ವಿದ್ಯಾರ್ಥಿಗಳಿಗೂ ಎಲ್ಲಾ ವರ್ಗದ ಮಾರ್ಗದರ್ಶಕರಲ್ಲಿ ಪಿ.ಹೆಚ್.ಡಿ ಅವಕಾಶವನ್ನು ಒದಗಿಸಬೇಕಾಗಿದೆ. ಹಾಗೆಯೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ.ಜಾ.ಪ.ಪಂ ಅಭಿವೃದ್ದಿ ಕೋಶಗಳನ್ನು ಸ್ಥಾಪಿಸಬೇಕಿದೆ.
ಹಾಗಾಗಿ ಈಗಿನಿಂದಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಜಾತಿಜಾತಿಗಳ ನಡುವೆ ಸಾಮರಸ್ಯವನ್ನು ಪರಿಣಾಮಕಾರಿಯಾಗಿ ಉಂಟುಮಾಡುವಂತಹ ಪಠ್ಯಕ್ರಮವನ್ನು ಅಳವಡಿಸಬೇಕು. ಬರೀ ಅಳವಡಿಸಿದರೆ ಸಾಲದು ಅದನ್ನು ಚಾಚೂ ತಪ್ಪದೇ ಅನುಸರಿಸುವ ಉಪಕ್ರಮಗಳನ್ನು ಅಭ್ಯಾಸಿಸುವಂತೆ ಮಾಡಬೇಕು. ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಜಾತಿ ನಿರ್ಮೂಲನಾ ಮತ್ತು ಸಮಾನತೆಯ ಬೋಧನಾ ವಿಧಾನಗಳನ್ನು ಅಳವಡಿಸಿ ಬೋಧಿಸುವ ಮನೋಭಾವನೆಯನ್ನು ಮತ್ತು ಕೌಶಲಗಳನ್ನು ಪ್ರಶಿಕ್ಷಣಾರ್ಥಿಗಳಲ್ಲಿ ಕರಗತಗೊಳಿಸಬೇಕಿದೆ. ಸೇವಾನಿರತ ಶಿಕ್ಷಕರಲ್ಲಿಯೂ ಈ ಮನೋಭಾವನೆಯ ಕೊರತೆಯಿದ್ದು ಅದನ್ನು ಮೂಡಿಸುವ ಅವಶ್ಯಕತೆ ಎದ್ದು ಕಾಣುತ್ತಿದೆ.
ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲಿ ದೀನದಲಿತ, ಆದಿವಾಸಿ, ಪರಿಶಿಷ್ಟರನ್ನು ಮತ್ತು ದುರ್ಬಲ ವರ್ಗದವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನ್ಯಾಕ್ (ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಕೌನ್ಸಿಲ್) ಮತ್ತು ಎನ್‍ಐಆರ್‍ಎಫ್(ರಾಷ್ಟ್ರೀಯ ಶ್ರೇಯಾಂಕ ಚೌಕಟ್ಟು ಸಂಸ್ಥೆ)ಯು ಕೂಡ ಈ ಒಂದು ಅಂಶವನ್ನು ಮಾನದಂಡವಾಗಿ ಸ್ವೀಕರಿಸಿ, ಮೌಲ್ಯಮಾಪನ ಮಾಡಿ, ಶ್ರೇಯಾಂಕವನ್ನು ನೀಡುವಾಗ ಪರಿಗಣಿಸಬೇಕು ಎಂಬುದು ಸೂಕ್ತ ಸಲಹೆಯಾಗಿದೆ. ಆದುದರಿಂದ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡದೇ, ಸಮಸ್ಯೆಗಳನ್ನು ಬಗೆಹರಿಸಿ ಎಲ್ಲರ ಏಳ್ಗೆಗೆ ಕಾರಣವಾಗಬೇಕು. ಇಲ್ಲದಿದ್ದರೆ ಪ್ರಪಂಚದಲ್ಲಿ ಯಾವ ರ್ಯಾಂಕ್ ಪಡೆದರೂ ವ್ಯರ್ಥವೆನಿಸುತ್ತದೆ. ಇನ್ನೂ ಮುಂದಾದರೂ ಇಂತಹ ತಾರತಮ್ಯವೆಸಗದೆ, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ, ಸಂವಿಧಾನಬದ್ಧ ಕೆಲಸಗಳನ್ನು ಇಂತಹ ಉನ್ನತ ಸಂಸ್ಥೆಗಳು ಮಾಡಲು ಕಾರ್ಯಪ್ರವೃತ್ತರಾಗಲಿ ಎಂದು ಆಶಿಸೋಣ.
 ಡಾ. ಜಗನ್ನಾಥ ಕೆ. ಡಾಂಗೆ

About The Author

Leave a Reply

Your email address will not be published. Required fields are marked *