April 29, 2024

Chitradurga hoysala

Kannada news portal

ಶಿಕ್ಷಕರ ಪ್ರಸ್ತುತ ಸವಾಲುಗಳು ಮತ್ತು ಜವಾಬ್ದಾರಿಗಳು

1 min read

ಶಿಕ್ಷಕರ ಪ್ರಸ್ತುತ ಸವಾಲುಗಳು ಮತ್ತು ಜವಾಬ್ದಾರಿಗಳು

 

ಪ್ರತೀ ವರ್ಷವೂ ಸೆಪ್ಟಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ
ಆಚರಿಸಲಾಗಿತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು
ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಅಂದು ಶಿಕ್ಷಕರೂ ಸಹ ತಮ್ಮ ವೃತ್ತಿಯ ಕುರಿತು ಅವಲೋಕನ
ಮಾಡಿಕೊಳ್ಳುವ ಸಮಯವೂ ಹೌದು. ಆ ನಿಟ್ಟಿನಲ್ಲಿ ಈ ಲೇಖನವು ಶಿಕ್ಷಕರ ಸಮಸ್ಯೆ ಮತ್ತು ಸವಾಲುಗಳನ್ನು
ಓರೆ ಹಚ್ಚಿ ನೋಡುವ ಹಾಗು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸಮಾಡುವ ಅವಶ್ಯಕತೆಯನ್ನು ಸಾರುವ
ಪ್ರಯತ್ನವಾಗಿದೆ. ಪ್ರಪಂಚದ ಪ್ರತಿಯೊಂದು ಜೀವ ಸಂಕುಲವೂ ಸಹ ನಿಸರ್ಗದಲ್ಲಿ ತನ್ನದೇ ಆದ
ಸ್ಥಾನಮಾನವನ್ನು ಹೊಂದಿರುತ್ತದೆ. ನಿರಂತರವಾಗಿ ಸಹಜ ರೀತಿಯಲ್ಲಿ ಬದುಕಲು ಅನೇಕ ಸವಾಲು,
ಸಂಕಷ್ಟಗಳನ್ನು ಎದುರಿಸಿ ಜೀವಿಸಬೇಕಾಗುತ್ತದೆ. ಅಷ್ಟೇ ಮಹತ್ತರವಾದ ಜವಾಬ್ದಾರಿಯನ್ನು ಸಹ
ಹೊಂದಿರುತ್ತವೆ. ನಾಗರಿಕ ಸಮಾಜದಲ್ಲಿ ಮಾನವನೂ ಸಹ ಸವಾಲು ಜವಾಬ್ದಾರಿಗಳ ಸರಪಣಿಯಲ್ಲಿ
ಬಂಧಿಸಿಕೊಂಡಿರತ್ತಾನೆ. ಅದರಲ್ಲಿ ಎಲ್ಲರಿಗಿಂತಲೂ ಪ್ರಮುಖ ಪಾತ್ರ ವಹಿಸುವವನೇ ಶಿಕ್ಷಕ. ಸಮಾಜದಲ್ಲಿ
ಶಿಕ್ಷಕನ ಪಾತ್ರ ಅಗಾಧವಾದುದು. ಶಿಕ್ಷಕರಿಗಿರುವಷ್ಟು ಮಹತ್ತರ ಜವಾಬ್ದಾರಿ ಇತರರಿಗೆ ಇರಲಾರದು ಎಂದರೆ
ತಪ್ಪಾಗಲಾರದು. ಶಿಕ್ಷಕನಿಗೆ ತನ್ನದೇ ಆದ ಮೌಲ್ಯಯುತ ಗುಣಗಳಿವೆ, ಅದಕ್ಕನುಗುಣವಾಗಿ ನಡೆದಾಗ ಮಾತ್ರ
ಅದಕ್ಕೊಂದು ಅರ್ಥ ಸಿಗುತ್ತದೆ.
ತನ್ನ ಜೀವನವನ್ನು ಇತರಿಗಾಗಿ ಮತ್ತು ಮುಂದಿನ ಪೀಳಗೆಗಾಗಿ ಮುಡುಪಾಗಿಟ್ಟು, ಸಮಾಜದ
ಏಳಿಗೆಯನ್ನು ನಿರಂತರವಾಗಿ ಬಯಸುವವನೇ ನಿಜವಾದ ಶಿಕ್ಷಕ. ಸಮಾಜದ ಏಳಿಗೆಯೆಂದರೆ ಅಸಮಾನತೆಯಿಂದ
ಸಮಾನತೆಯಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಸಮಾಜದ ಅನಿಷ್ಟ ಪದ್ಧತಿಗಳನ್ನು ನಿವಾರಿಸಿ ಸ್ವಸ್ಥ ಸಮಾಜದ
ಕಡೆಗೆ, ಯಾವುದೇ ರೀತಿಯ ಭೇದಭಾವ ಮಾಡದೆ ಮತ್ತು ಸಮಾಜದ ಸರಿತಪ್ಪುಗಳನ್ನು ತಿದ್ದುವ ಮೂಲಕ
ಸೂಕ್ತ ಮಾರ್ಗದರ್ಶನ ನೀಡುವುದಾಗಿದೆ. ಪ್ರಸ್ತುತದಲ್ಲಿ ಇಂತಹ ಶಿಕ್ಷಕರ ಅವಶ್ಯಕತೆ ಎದ್ದು ಕಾಣುತ್ತಿದೆ.
ಕಲಿಯುವುದರ ಜೊತೆಗೆ ಪರಿಣಾಮಕಾರಿಯಾಗಿ ಕಲಿಸುವ, ಇತರರ ಬದುಕನ್ನು ರೂಪಿಸುವ ಮತ್ತು
ಇತರರಿಗೆ ಮಾದರಿಯಾಗುವಂತೆ ಜೀವನ ನಡೆಸುವವನೇ ನಿಜವಾದ ಆದರ್ಶ ಶಿಕ್ಷಕ. ಲಿಯೋ ಟಾಲ್ಸ್‍ಟಾಯ್
ಹೇಳಿರುವಂತೆ “ದೈಹಿಕ ಬೆಳವಣಿಗೆಯ ಅಂತ್ಯವೇ ಅಂತರಂಗದ ಬೆಳವಣಿಗೆಯ ಆರಂಭ.” ಅಂತರಂಗದ ಚೈತನ್ಯ
ಮಗುವಿನಲ್ಲಿ ಹೆಚ್ಚಾಗುವಂತೆ ಶಿಕ್ಷಕರಲ್ಲಿಯೂ ಕೂಡ ಬೋಧನೆ, ಕಲಿಸುವಿಕೆ, ಕಲಿಯುವಿಕೆ ಹೆಚ್ಚಾಗಬೇಕು.
ಬೋಧನೆ ಎಂಬುದು ವಿಜ್ಞಾನವು ಹೌದು, ಕಲೆಯೂ ಹೌದು, ಬೋಧನೆಯನ್ನು ಕಲೆಯಾಗಿ ವ್ಯಕ್ತಪಡಿಸುವ
ಪ್ರಸ್ತುತತೆ ಹೆಚ್ಚಾಗಿದ್ದು, ಒಪ್ಪಂದ ಆಧಾರಿತ ಶಿಕ್ಷಕನಾಗದೇ ಜ್ಞಾನವನ್ನು ಎಲ್ಲರಿಗೂ ಸರಿಯಾದ ಸಮಯಕ್ಕೆ
ತಲುಪಿಸುವಂತಾಗಬೇಕು.
ಕೇಂದ್ರ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಬಿಡುಗಡೆ ಮಾಡಿದೆ. ಶಿಕ್ಷಕರು
ಭವಿಷ್ಯದ ನಿರ್ಮಾತೃ, ಸಮಾಜದ ಬೆಲೆಕಟ್ಟಲಾಗದ ಆಸ್ತಿ ಎಂದು ಪರಿಣಿಸಿ, ಶಿಕ್ಷಕರಿಗೆ ಅತೀ ಹೆಚ್ಚಿನ ಒತ್ತನ್ನು
ನೀಡಿರುವುದನ್ನು ಗಮನಿಸಬಹುದು. ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ನೇಮಕಾತಿಯಲ್ಲಿ ಮತ್ತು ವೃತ್ತಿ
ಬೆಳವಣಿಗೆ, ಮಾನದಂಡ ಮತ್ತು ಮೌಲ್ಯಮಾಪನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ. ಶಿಕ್ಷಕರ
ಮೌಲ್ಯಮಾಪನವನ್ನು ವಿದ್ಯಾರ್ಥಿಗಳಿಂದ, ಪೋಷಕರಿಂದ, ಸಹೋದ್ಯೋಗಿಗಳಿಂದ ಮತ್ತು ಉನ್ನತ
ಅಧಿಕಾರಿಗಳಿಂದ ಮಾಡಿಸಲಾಗುವುದೆಂದು ಸಲಹೆ ನೀಡಿದೆ.
ಜಗತ್ತು ಹಿಂದೆಂದೂ ಕಂಡಿರದ ರೀತಿಯಲ್ಲಿ ಕೋವಿಡ್-19 ಎಂಬ ಆರೋಗ್ಯದ ಬಿಕ್ಕಟ್ಟಿನ
ಸಮಯವನ್ನು ಎದುರಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರ ವರ್ಗವೂ ಕೂಡ ಅನೇಕ ಕಷ್ಟನಷ್ಟ, ಸಮಸ್ಯೆ,
ಸವಾಲು ಎದುರಿಸಬೇಕಾಯಿತು. ಸರ್ಕಾರಿ ಶಿಕ್ಷಕರನ್ನು ಹೊರೆತುಪಡಿಸಿ, ಬಹುತೇಕ ಅರೆ ಸರ್ಕಾರಿ ಮತ್ತು
ಖಾಸಗಿ ಶಾಲೆಗಳ ಶಿಕ್ಷಕರು ಪಟ್ಟಪಾಡು ಅಷ್ಟಿಷ್ಟಲ್ಲ. ಸರಳ ಜೀವನವನ್ನು ನಡೆಸಲು ಸಹ ಈ ಸನ್ನಿವೇಶದಲ್ಲಿಹೆಣಗಾಡಬೇಕಾದ ಪರಿಸ್ಥಿತಿ ಉಂಟಾಯಿತು. ಆದರೂ ಶಿಕ್ಷಕರ್ಯಾರು ಧೃತಿಗೆಡೆದೆ ತುರ್ತು ಸಂದರ್ಭಕ್ಕೆ
ಅನುಗುಣವಾಗಿ ಇನ್ನಿತರ ಉದ್ಯೋಗಗಳನ್ನು ಅರಸಿಕೊಂಡರು. ಕೂಲಿ, ಪಾನಿಪುರಿ ಅಂಗಡಿ, ಹಣ್ಣು-ತರಕಾರಿ
ಅಂಗಡಿ ಮುಂತಾದವುಗಳನ್ನು ನಡೆಸಿ ದಿನಪತ್ರಿಕೆಗಳನ್ನು ಹಂಚಿ, ಹಾಲು ಮಾರುವ ಮೂಲಕ ಬದುಕಿನಲ್ಲಿ
ಯಾವುದಕ್ಕೂ ಹೆದರದೆ ಜೀವನ ಸಾಗಿಸಿದ್ದು ಸಾಮಾನ್ಯ ವಿಷಯವಲ್ಲ.
“ಒಗ್ಗಟ್ಟಾಗಿ ಬಾಳಬೇಕು, ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ತತ್ವವನ್ನು ವಿದ್ಯಾರ್ಥಿಗಳಿಗೆ ಬೋಧಿಸುವ
ಶಿಕ್ಷಕರೇ ಒಗ್ಗಟ್ಟಾಗದೇ ಸರ್ಕಾರಿ/ಅರೆಸರ್ಕಾರಿ/ಖಾಸಗಿ ಎಂಬ ಬೇಧಭಾವವನ್ನು ಪ್ರಾಥಮಿಕ ಹಂತದಿಂದ ಹಿಡಿದು
ಉನ್ನತ ಶಿಕ್ಷಣದವರೆಗೂ ಅನುಸರಿಸುತಿದ್ದಾರೆ. ಆದುದರಿಂದ ಶಿಕ್ಷಣ ರಂಗದಲ್ಲಿ ಇನ್ನೂ ಹೆಚ್ಚಿನ ಜಟಿಲ
ಸಮಸ್ಯೆಗಳು ಆವರಿಸಿಕೊಂಡಿವೆ. ಆದರೆ ಇತರ ವೃತ್ತಿಗಳು ಇದಕ್ಕೆ ಹೊರತಾಗಿವೆ. ಉದಾಹರಣೆಗೆ: ವಕೀಲ
ಅಥವಾ ವೈದ್ಯ ಹಾಗೂ ಇನ್ನಿತರ ವೃತ್ತಿಗಳಲ್ಲಿ ಉದ್ಯೋಗ/ಉದ್ಯೋಗಿಗೆ ಸಂಬಂಧಪಟ್ಟಂತೆ ಯಾವುದಾದರೂ
ಸಮಸ್ಯೆಗಳು, ಸವಾಲುಗಳು ಉದ್ಭವಿಸಿದರೆ ಕೂಡಲೇ ಒಂದಾಗಿ ಬೆಂಬಲಕ್ಕೆ ನಿಲ್ಲುವ ಮೂಲಕ ಸಮಸ್ಯೆಗಳನ್ನು
ಶೀಘ್ರದಲ್ಲಿಯೇ ಪರಿಹರಿಸಿಕೊಳ್ಳುತ್ತಾರೆ.
ಪ್ರಸ್ತುತದಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳೆಂದರೆ:
 ನೇಮಕಾತಿ- ಶಿಕ್ಷಕರ ನೇಮಕಾತಿ ವಿಷಯದಲ್ಲಿ ಇಂದಿಗೂ ಎಲ್ಲಾ ಸರ್ಕಾರಗಳು ಮತ್ತು ರಾಜಕಾರಣಿಗಳು
ಕೂಡ ಅಸಡ್ಡೆ ತೋರುತ್ತಿವೆ. ಎಲ್ಲಾ ಹಂತದಲ್ಲಿಯೂ ಎಷ್ಟೋ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ,
ಸರಿಯಾದ ಸಮಯಕ್ಕೆ ನೇಮಕ ಮಾಡುವ ಮನಸ್ಥಿತಿ ತೋರುತ್ತಿಲ್ಲ. ಹೀಗಾದರೆ ಗುಣಮಟ್ಟದ ಶಿಕ್ಷಣ
ನೀಡಲು ಸಾಧ್ಯವಿಲ್ಲ. ಖಾಯಂ ಹುದ್ದೆಗಳಿಗೆ ಬದಲಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ
ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅತಿಥಿ ಶಿಕ್ಷಕರನ್ನು ಅತ್ಯಂತ ಕಡಿಮೆ ವೇತನಕ್ಕೆ
ದುಡಿಸಿಕೊಳ್ಳುವ ಮೂಲಕ ಅನ್ಯಾಯವನ್ನು ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಎಸಗುತ್ತಿವೆ.
 ನೇಮಕಾತಿಯಲ್ಲಿ ಪಾರದರ್ಶಕತೆ – ಎಲ್ಲಾ ಹಂತದ ಶಿಕ್ಷಕರ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು
ಕಾಪಾಡದೇ ಇರುವುದರಿಂದ, ಶಿಕ್ಷಕರು ಸಮಾಜದಲ್ಲಿ ಪಾರದರ್ಶಕವಾಗಿ ಸೇವೆಯನ್ನು ಮಾಡಲು
ಸಾಧ್ಯವಾಗುವುದಿಲ್ಲ. ಇಂದು ಅನ್ಯ ಮಾರ್ಗಗಳ ಮೂಲಕ ಅಂದರೆ ಹಣ, ಜಾತಿ, ಧರ್ಮ, ರಾಜಕೀಯ
ಬಲದ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರಿಂದ ಜ್ಞಾನಕ್ಕೆ ಬೆಲೆಯಿಲ್ಲದಂತಾಗಿ ಉದ್ಯೋಗವು
ಮಾರಾಟದ ಸರಕಾಗಿದೆ. ಖಾಸಗಿ ವಿದ್ಯಾ ಸಂಸ್ಥೆಗಳು ಅವರವರ ಜಾತಿ-ಧರ್ಮದವರನ್ನು ಗುರುತಿಸಿ
ಅವಕಾಶ ನೀಡುವ ಪರಿಪಾಠವನ್ನು ಅನುಸರಿಸುತ್ತಿವೆ.
 ಜ್ಞಾನ ಕೌಶಲಗಳ ಅಪವ್ಯಯ- ಪ್ರತೀ ವರ್ಷವೂ ಅತ್ಯುನ್ನತ ಶ್ರೇಣಿಯೊಂದಿಗೆ ಶಿಕ್ಷಕ ಪದವಿಗಳನ್ನು
ಪಡೆದುಕೊಂಡು ಸಾವಿರಾರು ಭಾವೀ ಶಿಕ್ಷಕರು ಹೊರಬರುತ್ತಿದ್ದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು
ಯಾವುದೇ ರೀತಿಯ ಉದ್ಯೋಗ ನೀಡದೆ, ಉದ್ಯೋಗವನ್ನು ಸೃಷ್ಟಿಸಿದೆ ಅವರಲ್ಲಿರುವ ಜ್ಞಾನ
ಕೌಶಲಗಳಗಳನ್ನು ಅಪವ್ಯಯ ಮಾಡುತಿದ್ದಾರೆ.
 ನವೀನ ಮಾದರೀಯ ಬೋಧನಾ ವಿಧಾನಗಳು- ಇಂದಿನ ಶಿಕ್ಷಕರು ಸಂಪ್ರದಾಯಬದ್ಧ ಬೋಧನಾ
ಕೌಶಲಗಳನ್ನೇ ಇಂದಿಗೂ ಉಪಯೋಗಿಸುತಿದ್ದಾರೆ. ಕಾಲಕಾಲಕ್ಕೆ ಅನುಗುಣವಾಗಿ ನವೀನ ಮಾದರಿಯ
ಬೋಧನಾ ವಿಧಾನಗಳು, ಕೌಶಲಗಳು, ತಾಂತ್ರಿಕತೆಯ ಉಪಕ್ರಮಗಳು ಮೂಲಕ ಬೋಧಿಸುವುದನ್ನು
ಕಲಿಯಬೇಕಿದೆ.
 ಸೂಕ್ತ ಸ್ಥಾನಮಾನ- ಸರ್ಕಾರ/ಸರ್ಕಾರೇತರ ಸಂಸ್ಥೆಗಳು ಶಿಕ್ಷಕರನ್ನು ದಿನಗೂಲಿ ನೌಕರರಂತೆ
ನಡೆಸಿಕೊಳ್ಳುವುದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ. ಚುನಾವಣೆ, ಜನಗಣತಿ, ಅನ್ನ
ದಾಸೋಹ ಇನ್ನೂ ಮುಂತಾದ 40ಕ್ಕೂ ಹೆಚ್ಚು ಬೋಧನೆಗೆ ಸಂಬಂಧಿಸದ ಚಟುವಟಿಕೆಗಳಿಗೆ ಶಿಕ್ಷಕರನ್ನು
ನಿಯೋಜಿಸುವ ಪರಿಪಾಠ ಇದೆ. ಇಂತಹ ಚಟುವಟಿಕೆಗಳಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕಾಗಿದೆ. ಈಮೂಲಕ ಶಿಕ್ಷಕರಿಗೆ ವೃತ್ತಿಯಲ್ಲಿ ಸೂಕ್ತ ರೀತಿಯಲ್ಲಿ ಸ್ಥಾನಮಾನ ದೊರಕುವಂತೆ ಮಾಡುವುದರ
ಅವಶ್ಯಕತೆಯಿದೆ.
 ಅವಕಾಶವಾದಿತನ- ವೃತ್ತಿಪರ ಮಾನದಂಡಗಳನ್ನು ಬದಿಗಿಟ್ಟು ಅವಕಾಶಕ್ಕಾಗಿ ಹಾತೊರೆಯುತ್ತಿರುವ ಶಿಕ್ಷಕರ
ಸಂಖ್ಯೆ ದಿನದಿನದಿಂದ ಹೆಚ್ಚಾಗುತ್ತದೆ ಇದು ವೃತಿಪರತೆಗೆ ಮಾರಕ ಮತ್ತು ವೃತಿಯಲ್ಲಿ ಅರಾಜಕತೆಯನ್ನು
ಸೃಷ್ಟಿಮಾಡುತ್ತದೆ. ಸರಿತಪ್ಪುಗಳನ್ನು ಅವಲೋಕಿಸದೆ, ಮನಬಂದಂತೆ ನಡೆದುಕೊಳ್ಳುತ್ತಿರುವುದು ಶಿಕ್ಷಕರಿಗೆ
ಕೀರ್ತಿಯನ್ನು ತರುವಂತಹದ್ದಲ್ಲ. ಅವಕಾಶವನ್ನು ಗಿಟ್ಟಿಸಿಕೊಳ್ಳಲು ನಿಯಮಗಳನ್ನು ಗಾಳಿಗೆ ತೂರಿ,
ಜಾತಿವಾದಿ,ಲಿಂಗಾಧಾರಿತ, ಧರ್ಮಾಂಧತೆಯ ದಾರಿಯಲ್ಲಿ ಸಾಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ
ಇದು ಸಮಾಜದಲ್ಲಿ ಶಿಕ್ಷಕರ ಕುರಿತಾದ ಋಣಾತ್ಮಕ ಭಾವನೆಯನ್ನು ಮೂಡಿಸುತ್ತದೆ. ಇದರಿಂದ ನೈಜ ವೃತ್ತಿ
ಸಂಹಿತೆ ಪೂರಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಮಾರಕವಾಗುತ್ತಿದೆ.
 ಸೇವಾ ಭದ್ರತೆ- ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲದಿರುವುದು. ನೇಮಕಾತಿಯಲ್ಲಿ
ಯಾವುದೇ ರೀತಿಯ ಸೂಕ್ತ ನೀತಿನಿಯಮಗಳನ್ನು ಪಾಲಿಸದಿರುವುದು. ಶಿಕ್ಷಕರನ್ನು ಆಯ್ಕೆ
ಮಾಡಿಕೊಳ್ಳುವಾಗ ಸ್ವಜನ ಪಕ್ಷಪಾತ, ಜಾತಿ, ಮತ, ಪಂಥ, ಲಿಂಗ, ಧರ್ಮಗಳನ್ನು ಪರಿಗಣಿಸುವುದು
ಸರ್ವೇ ಸಾಮಾನ್ಯವಾಗಿದೆ.
 ಕಡಿಮ ವೇತನ- ಖಾಸಗಿ ಶಿಕ್ಷಕರಿಗೆ ಅತ್ಯಂತ ಕಡಿಮ ವೇತನ ನೀಡುವ ಮೂಲಕ ಹಣಗಳಿಸುವ
ಮಾರ್ಗವಾಗಿ ಖಾಸಗಿ ಶಾಲೆಗಳು ಬದಲಾಗಿವೆ. ಒಬ್ಬ ದಿನಗೂಲಿ ನೌಕರನಿಗೂ ಸಿಗುವಷ್ಟು ವೇತನ
ಶಿಕ್ಷಕರಿಗೆ ಸಿಗುತ್ತಿಲ್ಲ. ಬಹುತೇಕ ಖಾಸಗಿ ಶಾಲೆಗಳ ಶಿಕ್ಷಕರಾಗಬಯಸುವವರು
ಅವಕಾಶಗಳಿಲ್ಲದಿರುವುದರಿಂದ ಕೆಲಸ ಸಿಕ್ಕಿತೆಂಬ ಮನೋಭಾವನೆಯಿಂದ ಕಡಿಮೆ ವೇತನಕ್ಕೆ ಕೆಲಸ
ನಿರ್ವಹಿಸುತಿದ್ದಾರೆ.
 ಜಾಗತಿಕ ಸ್ಪರ್ಧಾತ್ಮಕತೆ- ಶಿಕ್ಷಣ ಸಂಸ್ಥೆಗಳ ನಡುವೆ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿದ್ದು ನವೀನ ರೀತಿಯ
ಕಟ್ಟಡಗಳನ್ನು ನಿರ್ಮಿಸುವುದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತವೆ. ಜ್ಞಾನವನ್ನು
ಅತ್ಯುತ್ತಮವಾಗಿ ಪಸರಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಆಗಬೇಕಾಗಿದೆ ಅತ್ಯುತ್ತಮ ಶಿಕ್ಷಕರನ್ನು
ಗೌರವ ಮತ್ತು ಸೂಕ್ತ ಸ್ಥಾನಮಾನಗಳನ್ನು ನೀಡಿ, ಅದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ
ಮಾಡಿಕೊಡಬೇಕಾಗಿದೆ.
 ಬೋಧನಾ ಸ್ವಾತಂತ್ರ್ಯ-ಶಿಕ್ಷಕರು ಹೊಸ ಅವಿಷ್ಕಾರಗಳು, ನಾವಿನ್ಯ ಬೋಧನಾ ವಿಧಾನಗಳು, ಹಾಗೂ
ಜಾಗತಿಕ ವಿದ್ಯಾಮಾನಗಳನ್ನು ವಿದ್ಯಾರ್ಥಿಗಳಿಗೆ ವಿಷಯದೊಂದಿಗೆ ಬಳಸಲು ಸಾಧ್ಯವಾಗುತ್ತಿಲ್ಲ.
 ಶಿಕ್ಷಕರನ್ನು ಗೌರವಿಸುವುದು-ಎಲ್ಲಾ ಹಂತದ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳ ಅತ್ಯುತ್ತಮ ಶಿಕ್ಷಕರನ್ನು
ಗುರುತಿಸಿ ಪ್ರಶಸ್ತಿ, ಬಹುಮಾನ ಮತ್ತು ಗೌರವಿಸುವ ಸಂಪ್ರದಾಯ ಪ್ರಾರಂಭಿಸಬೇಕಿದೆ.
ಶಿಕ್ಷಕರ ಜವಾಬ್ದಾರಿಗಳು:
 ಸರಿತಪ್ಪುಗಳ ವಿಶ್ಲೇಷಣೆ- ಸಮಾಜದಲ್ಲಿ ಸಾಕಷ್ಟು ಅನಿಷ್ಟ ಪದ್ಧತಿಗಳು, ಸಾಮಾಜಿಕ ಪಿಡುಗುಗಳು ಕಣ್ಣ
ಮುಂದೆ ನಡೆಯುತಿದ್ದರೂ ಯಾವುದೇ ರೀತಿಯ ಪ್ರತಿರೋಧ ತೋರದಿರುವ ಶಿಕ್ಷಕ ವರ್ಗವಿದೆ. ಅದರ
ಬದಲಾಗಿ ಸರಿಯಾದುದನ್ನು ಸರಿ ಎಂದು ತಪ್ಪಾದುದನ್ನು ತಪ್ಪು ಎಂದು ಹೇಳುವ ಎದೆಗಾರಿಕೆ ಶಿಕ್ಷಕರಲ್ಲಿ
ಇರಬೇಕಾಗುತ್ತದೆ. ಮುಂದಿನ ಸಮಾಜ ಯಾವ ರೀತಿಯಾಗಿರಬೇಕೆಂಬುದರ ದೂರದೃಷ್ಟಿ ಶಿಕ್ಷಖ
ರೂಪಿಸಬೇಕಿದೆ.
 ಜ್ಞಾನದೊಂದಿಗೆ ಮೌಲ್ಯ- ಶಿಕ್ಷಕರು ಬರೀ ಜ್ಞಾನಿಯಾದರೆ ಸಾಲದು ಕರುಣೆ, ಪ್ರೀತಿ, ತ್ಯಾಗ, ಉದಾರ
ಮನೋಭಾವ ಮತ್ತು ನಿಷ್ಪಕ್ಷಪಾತದಂತಹ ಉತ್ತಮ ಮೌಲ್ಯಗಳನ್ನೊಳಗೊಂಡ ನೀತಿವಂತರಾಗಬೇಕು. ತರಗತಿಯೊಂದಿಗೆ ಸಮಾಜ- ಶಿಕ್ಷಕರು ತರಗತಿ ಬೋಧನೆಗೆ ಮಾತ್ರ ಸೀಮಿತವಾಗದೇ ಯಾವುದೇ
ಜವಾಬ್ದಾರಿ ಕೊಟ್ಟರೂ ಸಮರ್ಪಕವಾಗಿ ಸಮಾಜದೊಂದಿಗೆ ಬೆರೆತು ಕಾರ್ಯನಿರ್ವಹಿಸಿ ತರಗತಿಯ
ಜ್ಞಾನವನ್ನು ಸಮಾಜದೊಂದಿಗೆ ಬೆರೆಸುವ ಕಾರ್ಯ ಮಾಡಬೇಕಿದೆ.
 ನಿರಂತರ ವೃತ್ತಿ ಬೆಳವಣಿಗೆ: ಶಿಕ್ಷಕರು ನಿರಂತರವಾಗಿ ಬೋಧನೆ, ಬರವಣಿಗೆ ಮತ್ತು ವಿಸ್ತರಣೆ
ಕಾರ್ಯಕ್ರಮಗಳ ಮೂಲಕ ವೃತ್ತಿಯಲ್ಲಿ ಬೆಳವಣಿಗೆಯಾಗಬೇಕು.
 ಮುಕ್ತ ಮನಸ್ಸಿನ ಚರ್ಚೆ- ಸಮಾಜ ಶಿಕ್ಷಣಕ್ಕೆ, ವೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಮತ್ತು
ಸವಾಲುಗಳಿಗೆ ಮುಕ್ತ ಮನಸ್ಸಿನಿಂದ ಮತ್ತು ವೈಚಾರಿಕ ರೀತಿಯಲ್ಲಿ ಚರ್ಚೆ ಮಾಡುವ ಕಾರ್ಯಗಳಲ್ಲಿ
ಶಿಕ್ಷಕರು ತೊಡಗಬೇಕಿದೆ. ಮಾನವತಾ ನೆಲೆಯಲ್ಲಿ ಚಿಂತಿಸಿ, ಒಳ್ಳೆಯ ದಾರಿಯನ್ನು ಅನುಸರಿಸುವುದು ಅವರ
ಆದ್ಯ ಕರ್ತವ್ಯ.
 ಐಕ್ಯತಾ ಮನೋಭಾವ- ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಶಿಕ್ಷಕ ಬಂಧುಗಳು ಯಾವುದೇ
ತಾರತಮ್ಯ ಮಾಡದೇ ಒಗ್ಗಟ್ಟಾಗಬೇಕು. ಎಲ್ಲರೂ ಹಿರಿಯ-ಕಿರಿಯ, ಸರ್ಕಾರಿ, ಅರೆಸರ್ಕಾರಿ, ಖಾಸಗಿ
ಶಿಕ್ಷಕರೆನ್ನುವ ಭಿನ್ನ ಧೋರಣೆಯನ್ನು ಹೊಂದಿರುವುದನ್ನು ಹೋಗಲಾಡಿಸಬೇಕು.
 ಅನುಭವದ ಸಾರ- ಅನುಭವ ಪಡೆದಂತಹ ಶಿಕ್ಷಕರು ಸರಿಯಾದ ಮಾಹಿತಿಯನ್ನು ಇತರರಿಗೆ
ತಿಳಿಸಕೊಡುವ ನಿಟ್ಟಿನಲ್ಲಿ ಕೆಲಸಮಾಡಬೇಕು. ಆದರೆ ಇಂದಿನ ಬಹುತೇಕ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು
ನಮ್ಮ ಕೆಲಸ ಇನ್ನೇನು ಮುಗಿಯುತು, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಕಳೆದು
ಹೋಗಿದ್ದಾರೆ. ನವೀನ ಮಾದರಿಯ ಪಾಠ ಕೌಶಲಗಳನ್ನು ಅಳವಡಿಸಿಕೊಳ್ಳುವಲ್ಲಿಯೂ ಸಹ
ವಿಫಲರಾಗಿರುವುದು ಕಂಡು ಬರುತ್ತದೆ.
 ಪ್ರಯೋಗಾತ್ಮಕತೆ- ಇಂದಿನ ಶಿಕ್ಷಕರು ತಮ್ಮನ್ನು ತಾವು ಪ್ರಯೋಗಕ್ಕೆ ಒಳಪಡಿಸಿಕೊಳ್ಳಬೇಕು, ಅದರಿಂದ
ಹೊರಹೊಮ್ಮಿದ ಅನುಭವಗಳನ್ನು, ಸರಿಯಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ, ಸಹೋದ್ಯೋಗಿಗಳಿಗೆ
ಮತ್ತು ಸಮಾಜಕ್ಕೆ ಪಸರಿಸುವ ಕೆಲಸವಾಗಬೇಕಿದೆ.
 ಶಿಕ್ಷಕರಲ್ಲಿ ದೂರದೃಷ್ಟಿಯ (ಗುರಿ, ಉದ್ದೇಶಗಳ) ಕೊರತೆ- ಭವಿಷ್ಯದ ವಿದ್ಯಾರ್ಥಿಗಳ ಬಗ್ಗೆ ಚಿಂತನೆ
ಕಾಲಕಾಲಕ್ಕೆ ಅನುಗುಣವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ನೀತಿನಿಯಮಗಳನ್ನು ತಿಳಿದುಕೊಳ್ಳುವ, ಪ್ರತಿಕ್ರಿಯಿಸುವ
ಮತ್ತು ಪರಿಣಾಮಕಾರಿಯಾಗಿ ವಿಶ್ಲೇಷಣೆ ಮಾಡುವ ಅವಶ್ಯಕತೆ ಎದ್ದು ಕಾಣುತ್ತದೆ.
ಶಿಕ್ಷಕರು ಇಷ್ಟೆಲ್ಲಾ ಸಮಸ್ಯೆ, ಸವಾಲುಗಳನ್ನು ಅನುಭವಿಸುತಿದ್ದರೂ, ಜವಾಬ್ದಾರಿಗಳಿದ್ದರೂ, ಇದು
ನನ್ನೊಬ್ಬನ ಸಮಸ್ಯೆಯಲ್ಲ, ನನ್ನೊಬ್ಬನ ಜವಾಬ್ದಾರಿಯಲ್ಲ, ಶಿಕ್ಷಕ ಸಮೂಹದ ಸಮಸ್ಯೆ ಅಥವಾ ಜವಾಬ್ದಾರಿ,
ನಮಗೆ ಸಂಬಂಧಪಟ್ಟಿದ್ದಲ್ಲ ಎಂದುಕೊಳ್ಳುತ್ತಾ ಸುಮ್ಮನಾಗಿರುವುದು ಸರಿಯಲ್ಲ. ಮುಂದೆ ಬರುವ ಶಿಕ್ಷಕರಿಗೂ
ಸಹಾಯವಾಗುವ ರೀತಿಯಲ್ಲಿ ಕೆಲಸ ಮಾಡಬೇಕಿದೆ. ಸ್ವಾಮಿ ವಿವೇಕಾನಂದರ ವಾಣಿಯಂತೆ “ಏಳಿ, ಎದ್ದೇಳಿ,
ಗುರಿಮುಟ್ಟುವ ತನಕ ನಿಲ್ಲದಿರಿ” ಎನ್ನುವಂತೆ, ಸಮಸ್ಯೆಗಳು ಬಗೆಹರಿಯುವವರೆಗೂ ಹೋರಾಟದ
ಮನೋಭಾವವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕಿದೆ. ವೃತ್ತಿಯಲ್ಲಿನ ಬದ್ಧತೆ, ಹಕ್ಕುಗಳನ್ನು ಪಡೆಯಲು
ಬುದ್ಧಿವಂತರಾದರೆ ಸಾಲದು, ಧೈರ್ಯಶಾಲಿಗಳಾಗಬೇಕಿದೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮೂಲಕ
ಯಶಸ್ವಿಯಾಗಿ ಮುನ್ನಡೆಯೋಣ, ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸೋಣ.

ಡಾ. ಜಗನ್ನಾಥ ಕೆ. ಡಾಂಗೆ, ಶಿಕ್ಷಣ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ.
ಡಾ. ಪ್ರದೀಪಕುಮಾರ ಸಹಾಯಕ ಪ್ರಾಧ್ಯಾಪಕರು ಜಿ.ಎಸ್.ಎಸ್.ಎಸ್ ತಾಂತ್ರಿಕ ಮಹಾವಿದ್ಯಾಲಯ ಮೈಸೂರು.
ಮತ್ತು
ಉಷಾ.ಆರ್.ಜಿ ಸಹಾಯಕ ಪ್ರಾಧ್ಯಾಪಕರು ಓಂಕಾರ್ಮಲ್ ಶಿಕ್ಷಣ ಮಹಾವಿದ್ಯಾಲಯ ಮೈಸೂರು.
ಸಿದ್ದರಾಜು. ಸಂಶೋದನಾರ್ಥಿ. ಶಿಕ್ಷಣ ವಿಭಾಗ ಕುವೆಂಪು ವಿಶ್ವವಿದ್ಯಾಲಯ

About The Author

Leave a Reply

Your email address will not be published. Required fields are marked *