ಚಿತ್ರದುರ್ಗ ಶಾಖಾ ಕಾಲುವೆ: ಭೂಸ್ವಾಧೀನಕ್ಕೆ ಗ್ರಾಮಸಭೆ
1 min readಚಿತ್ರದುರ್ಗ, ಸೆಪ್ಟೆಂಬರ್ 05:
ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಹಿರಿಯೂರು ತಾಲ್ಲೂಕು ಐಮಂಗಲ ಹೋಬಳಿಯ ಭರಂಪುರ, ಗೋಗುದ್ದು ಗ್ರಾಮಗಳಲ್ಲಿ ಹಾದು ಹೋಗುವ ಕಾಲುವೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸ್ವಾಧೀನದಾರರಾದ ರೈತರೊಂದಿಗೆ ಗ್ರಾಮಸಭೆ ನಡೆಯಿತು.
ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದ ಕಲ್ಕುಂಟೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಶುಕ್ರವಾರ (ಸೆ.4) ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಿಸಲು ಜಮೀನುಗಳ ಭೂಸ್ವಾಧೀನ ಸಂಬಂಧ ಅಪರ ಜಿಲ್ಲಾಧಿಕಾರಿ ಹಾಗೂ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಸಿ. ಸಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ಆಯೋಜಿಸಲಾಗಿತ್ತು.
ಇಲ್ಲಿ ಹಾದು ಹೋಗುವ ಚಿತ್ರದುರ್ಗ ಶಾಖಾ ಕಾಲುವೆಗೆ ಭರಂಪುರ ಗ್ರಾಮದ ವಿವಿಧ ಸರ್ವೇನಂಬರ್‍ಗಳ ವ್ಯಾಪ್ತಿಯಲ್ಲಿ 27.22 ಎಕರೆ ಹಾಗೂ ಗೋಗುದ್ದು ಗ್ರಾಮದಲ್ಲಿ 22 ಗುಂಟೆ ಜಮೀನನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಈ ಸರ್ವೇನಂಬರ್‍ಗಳಲ್ಲಿ ಒಟ್ಟು 37 ಖಾತೆದಾರರು ಬರಲಿದ್ದಾರೆ.
ರೈತರೊಂದಿಗೆ ಸಮಾಲೋಚನೆ: ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕೆ ಅಗತ್ಯವಾದ ಜಮೀನು ಭೂಸ್ವಾಧೀನಕ್ಕಾಗಿ ರೈತರೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಸಭೆಯಲ್ಲಿ ಭೂ ಸ್ವಾಧೀನ ಪರಿಹಾರ ಮೊತ್ತ ಎಷ್ಟು? ಯಾವಾಗ ಪರಿಹಾರ ನೀಡಲಾಗುತ್ತದೆ? ಎಂಬುದರ ಕುರಿತು ಪ್ರಶ್ನಿಸಿ ರೈತರು ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಭೂಸ್ವಾಧೀನ ಸಂಬಂಧ ನಿಯಾಮಾನುಸಾರ ಪರಿಹಾರ ಒದಗಿಸಲಾಗುತ್ತದೆ. ಐದು ವರ್ಷಗಳ ಸರಾಸರಿ ಮೌಲ್ಯ ಪರಿಶೀಲಿಸಿ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು. ಒಬ್ಬ ಖಾತೆದಾರನ ಶೇ. 50 ಕ್ಕಿಂತ ಹೆಚ್ಚು ಜಮೀನು ಭೂಸ್ವಾಧೀನವಾದರೆ ಮಾತ್ರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ನಿಯಮದ ಪ್ರಕಾರ ಸರ್ಕಾರದಿಂದ ರೂ.5 ಲಕ್ಷ ಪರಿಹಾರ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಬರುವ ಖಾತೆದಾರರದಲ್ಲಿ ಯಾರದೂ ಕೂಡ ಶೇ 50 ಕ್ಕಿಂತ ಹೆಚ್ಚು ಭೂಸ್ವಾಧೀನವಾಗುವುದಿಲ್ಲ.್ಲ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಪರಿಹಾರ ಒದಗಿಸಬೇಕು ಎಂಬ ಮಾನದಂಡದ ಕುರಿತು ಸಂಪೂರ್ಣವಾದ ಮಾಹಿತಿ ಖಾತೆದಾರರಿಗೆ ನೀಡಲಾಯಿತು.
ಗ್ರಾಮಸಭೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಹ್ಲಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.