April 26, 2024

Chitradurga hoysala

Kannada news portal

ವಿಘ್ನಗಳನ್ನು ನಿವಾರಿಸಿಕೊಂಡು ಹರಿದ ಭದ್ರಾ.

1 min read

ಭದ್ರಾ ಡ್ಯಾಂ ನಿಂದ ವಿವಿ ಸಾಗರ ಡ್ಯಾಂಗೆ ವೇದಾವತಿ ನದಿ ಮೂಲಕ ನೀರು ಹರಿಸಲು ಭಾನುವಾರ ಬೆಳಗಿನ ಜಾವ 12.20 ರಿಂದ 12.30 ಗಂಟೆಯಲ್ಲಿ ಬೆಟ್ಟದ ತಾವರೆಕೆರೆ ಬಳಿಯ ಪಂಪ್ ಎತ್ತಿ ನೀರು ಬಿಡಲು ಆರಂಭಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ಸಮೀಪದಲ್ಲೇ ವಾಸ್ತವ್ಯ ಹೂಡಿದ್ದ ಸಂಸದ ನಾರಾಯಣಸ್ವಾಮಿ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಪಂಪ್ ಹೌಸ್ ನಿಂದ ನೀರು ಹೊರ ಬಿದ್ದ ಕ್ಷಣದಲ್ಲಿ ಅಧಿಕಾರಿಗಳು, ರೈತ ಮುಖಂಡರು, ಸಂಸದರು ಸಂಭ್ರಮಿಸಿದರು.
ನೀರು ಹರಿಯಲು ವಿಳಂಬ ಏಕೆ-
ನೀರು ಹರಿಯಲು ವಿಳಂಬ ಏಕಾಯಿತು ಎನ್ನುವ ಪ್ರಶ್ನೆಗೆ ಕೆಲವರು ಸಂಸದರನ್ನೇ ಕೇಳಿ ಎನ್ನುವ ಕೊಂಕು ಮಾತುಗಳನ್ನು ಆಡಿದ್ದುಂಟು. ಈ ಎಲ್ಲ ರೀತಿಯ ನೋವು-ಅಪಮಾನಗಳನ್ನು ಕೇಳಿಯೂ ಕೇಳಿಸಿಕೊಂಡಿಲ್ಲ ಎನ್ನುವಂತೆ ಸರ್ಕಾರದ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಕೊನೆಗೂ ಭದ್ರಾ ನೀರು ಭಾನುವಾರದಿಂದ ಹರಿಯುತ್ತಿದೆ ಎಂದಾದರೆ ಅದಕ್ಕೆ ಸಂಸದರೇ ನೇರ ಕಾರಣ ಎಂದು ರೈತ ಸಂಘದ ಮುಖಂಡರು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕಳೆದ ಆಗಸ್ಟ್ 25 ರಿಂದ ನೀರು ಹರಿಸಲು ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದರು.
ಭದ್ರಾ ಡ್ಯಾಂ ಭರ್ತಿಗೆ ಕೇವಲ ಎರಡೂವರೆ ಅಡಿ ಬಾಕಿ ಇದೆ. ಮಳೆಗಾಲದಲ್ಲೇ ಭದ್ರಾ ಡ್ಯಾಂನಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸಿದರೆ ಪೋಲಾಗಿ ಹಳ್ಳಕ್ಕೆ ಹೋಗುವ ನೀರು ವಿವಿ ಸಾಗರ ಡ್ಯಾಂ ತಲುಪಿದರೆ ಈ ಭಾಗದ ರೈತರು, ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ ಎಂದು ತಿಳಿದ ಸಂಸದ ಎ.ನಾರಾಯಣಸ್ವಾಮಿ ಅವರು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ತಂದು ಆಗಸ್ಟ್ 25 ರಿಂದ ಭದ್ರಾ ನೀರು ಹರಿಸಲು ಸರ್ಕಾರದ ಆದೇಶ ಮಾಡಿಸಿದರು. ಇದರ ಮಧ್ಯ ಭದ್ರೆ ಬಾಗಿನ ಅರ್ಪಿಸಿ ಗಂಗಾಪೂಜೆ ಮಾಡಿ ನೀರೆತ್ತಲು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳೆ ಆಗಮಿಸಲಿದ್ದಾರೆಂದು ಆ.27ಕ್ಕೆ ದಿನಾಂಕ ಮುಂದೂಡಿತು.
ಆದರೆ ಈಗ ಸಚಿವರು ಬರುತ್ತಿಲ್ಲ, ನೀರನ್ನು ಎತ್ತಲು ಬಿಡದಂತ ಪರಿಸ್ಥಿಯನ್ನು ಕೆಲವು ಶಾಸಕರು ಮಾಡಿದ್ದಾರೆ ಎನ್ನುವ ಆರೋಪಿಗಳು ಕೇಳಿ ಬಂದವು. ಸಂಸದರ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು, ಅವರನ್ನು ಜಾಸ್ತಿ ಬೆಳೆಯಲು ಬಿಡಬಾರದು ಎನ್ನುವ ಬಿಜೆಪಿಯ ಕೆಲ ಶಾಸಕರೇ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಅಡ್ಡಿ ಮಾಡುತ್ತಿದ್ದರಿಂದ ನೀರು ಹರಿಸುವ ದಿನಾಂಕ ಮುಂದೂಡುತ್ತಲೆ ಹೋಯಿತು. ಇದರ ಮಧ್ಯ ಸಂಸದ ನಾರಾಯಣಸ್ವಾಮಿ ಅವರ ಅತಿಯಾದ ವೇಗಕ್ಕೆ ಕಡಿವಾಣ ಹಾಕಬೇಕೆನ್ನುವ ಮಹಾದಾಸೆಯನ್ನು ಕೆಲವು ಶಾಸಕರು ಇಟ್ಟುಕೊಂಡಿದ್ದರಿಂದ ಸಂಸದರ ಮತ್ತು ಶಾಸಕರ ಮುಸುಕಿನ ಗುದ್ದಾಟದಲ್ಲಿ ಜನರು ಬಡವರಾಗಿದ್ದರು.
ಸೆ.2 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಆಗಮಿಸಿ ಬಾಗಿನ ಅರ್ಪಿಸಿ ವಿವಿ ಸಾಗರಕ್ಕೆ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆಂದು ಅಧಿಕೃತ ಪ್ರವಾಸ ಕಾರ್ಯಕ್ರಮ ನಿಗದಿ ಆಯಿತು. ಆದರೆ ಕೂಡ ರದ್ದಾಯಿತು. ಸೆ.4ಕ್ಕೆ ನೀರು ಹರಿಯಲಿದೆ ಎಂದು ಮತ್ತೊಮ್ಮೆ ಸಮಯ ನಿಗದಿಯಾಯಿತು. ಅದಕ್ಕೂ ಅಡ್ಡಿ ಆಯಿತು. ಇದರ ಮಧ್ಯ ಶಿವಮೊಗ್ಗ ರೈತರು ವಿನಾ ಕ್ಯಾತೆ ತೆಗೆದರು.
ಇನ್ನೇನು ನೀರು ಹರಿಯುವುದೇ ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗತೊಡಗಿತು. ಆಗ ಅಖಾಂಡಕ್ಕೆ ಇಳಿದ ಸಂಸದ ಆನೇಕಲ್ ನಾರಾಯಣಸ್ವಾಮಿ ಕಳೆದ ಮೂರು ದಿನಗಳಿಂದ ಬೆಟ್ಟದತಾವರೆಕೆರೆಯಲ್ಲೇ ವಾಸ್ತವ್ಯ ಹೂಡಿ ಭದ್ರಾ ಡ್ಯಾಂನಿಂದ ಭಾನುವಾರ ಬೆಳಗಿನ ಜಾವ 12.30ರ ಸಮಯದಲ್ಲಿ ಮೋಟರ್ ಪಂಪ್ ಆನ್ ಮಾಡಿ ನೀರೆತ್ತಿ ಅದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು ಸಂಸದರ ಕಾರ್ಯ ವೈಖರಿಗೆ ಎಲ್ಲೆಡೆ ಮೆಚ್ಚುಗೆ ಆಗುತ್ತಿದೆ. 
ವಿದ್ಯುತ್ ತಾಂತ್ರಿಕ ಸಮಸ್ಯೆ ಸೇರಿದಂತೆ ಅನೇಕ ಅಡೆತಡೆಗಳ ಮಧ್ಯ ವಿವಿ ಸಾಗರಕ್ಕೆ ನೀರು ಹರಿಸುವ ಕಾರ್ಯದಲ್ಲಿ ಯಶಸ್ವಿಯಾದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ನಿಕಟಪೂರ್ವ ಮುಖ್ಯಇಂಜಿನಿಯರ್ ಶಿವಕುಮಾರ್ ಸೇರಿದಂತೆ ಅನೇಕ ಶ್ರಮಕ್ಕೆ ಸಂಸದ ನಾರಾಯಣಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *