ರಾಜ್ಯದಲ್ಲಿ ಪೋಲಿಸ್ ಕಾರ್ಯಚರಣೆ ತೀವ್ರ ಬಲೆಗೆ ಬೀಳುತ್ತಿದ್ದಾರೆ ಖದೀಮರು
1 min readಮೈಸೂರು: ಮಾದಕ ವಸ್ತು ಜಾಲ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದ ಬೆನ್ನಲ್ಲೇ, ಮೈಸೂರು ನಗರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಪರಿಣಾಮ ಮೈಸೂರಿನಲ್ಲಿ ಸಕ್ರಿಯವಾಗಿದ್ದ ಜಾಲ ಬೇರೆಡೆ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜಾಲದಲ್ಲಿ ಸಕ್ರಿಯವಾಗಿರುವ ಖದೀಮರು ಖಾಕಿ ಪಡೆಗೆ ಹೆದರಿ ಮೈಸೂರಿನಿಂದ ಬೇರೆಡೆಗೆ ಗಾಂಜಾ ಸಾಗಿಸುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಕೇರಳದ ತಿರುವನಂತಪುರಂನ ಆಟಿಂಗಲ್ ಬಳಿ 500 ಕೆಜಿ ಗಾಂಜಾ ಪತ್ತೆಯಾಗಿದ್ದು, ಮೈಸೂರಿನಿಂದ ಸರಬರಾಜಾಗಿದೆ ಎಂಬುದು ಕೇರಳ ಅಬಕಾರಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಸ್ಯಾಂಡಲ್‌ವುಡ್ ನಂಟಿನೊಂದಿಗೆ ಮಾದಕ ವಸ್ತು ಜಾಲ ಪೊಲೀಸರ ಬಲೆಗೆ ಬೀಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಖದೀಮರು, ತಮ್ಮ ನೆಲೆಯನ್ನು ಬದಲಿಸಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಈ ಪ್ರಕರಣ ಸಂಬಂಧ ಬಂಧಿತನಾಗಿರುವ ಕೈಸರ್ ಪಾಷಾ ಕೂಡ ಮೈಸೂರಿನವನಾಗಿದ್ದು, ಮೈಸೂರಿನಲ್ಲಿನ ಆತನ ನಿವಾಸದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.
ಮೈಸೂರಿನ ಡ್ರಗ್ಸ್ ಡಬಲ್ ದಾಳಿ.ಗಾಂಜಾ ಗಮ್ಮತ್ತಿನ ಜೊತೆ ಆಫ್ರಿಕನ್ ಖಾಟ್ ಕಾಟ
ಕಂಟೈನರ್ ಲಾರಿಯಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿರುವನಂತಪುರಂನ ಆಟಿಂಗಲ್‌ನಲ್ಲಿ ಕೇರಳದ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆಂಧ್ರ ಪ್ರದೇಶ ನೋಂದಣಿಯ ಕಂಟೈನರ್ ಲಾರಿಯನ್ನು ತಡೆದು ತಪಾಸಣಾ ಕಾರ್ಯ ನಡೆಸಿದ್ದಾರೆ. ಈ ವೇಳೆ ಲಾರಿ ಡ್ರೈವರ್ ಸೀಟ್ ಮೇಲ್ಬಾಗದಲ್ಲಿ ಪ್ರತ್ಯೇಕ ಕ್ಯಾಬಿನ್ ಇದ್ದು, ಪರಿಶೀಲನೆ ವೇಳೆ ಅಲ್ಲಿ 500 ಕೆಜಿ ಗಾಂಜಾ ಇರುವುದು ಪತ್ತೆಯಾಗಿದೆ. ಈ ವೇಳೆ ಲಾರಿಯಲ್ಲಿದ್ದ ಮೂವರಲ್ಲಿ ಒಬ್ಬ ಪರಾರಿಯಾಗಿದ್ದು, ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಜಾರ್ಖಂಡ್ ಮೂಲದ ಕೃಷ್ಣ (23), ಪಂಜಾಬ್‌ನ ಕುಲ್‌ದೀಪ್ ಸಿಂಗ್(32) ಬಂಧಿತರಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಮಾದಕ ವಸ್ತು ಮಾರಾಟದಲ್ಲಿ ಸಕ್ರಿಯವಾಗಿರುವ ಕೇರಳ ಮೂಲದ ಖದೀಮರ ಗುಂಪು, ಆಂಧ್ರ ಪ್ರದೇಶದಿಂದ ಮೈಸೂರಿಗೆ ಗಾಂಜಾವನ್ನು ತರಿಸಿ ದಾಸ್ತಾನಿರಿಸಿದ್ದು, ಸ್ಥಳೀಯವಾಗಿ ಮಾರಾಟ ಮಾಡುವುದರೊಂದಿಗೆ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿಕೊಂಡಿದ್ದರು.
ಇದರ ನಡುವೆ ಮೈಸೂರಿನಲ್ಲಿ ಮಾದಕ ವಸ್ತು ಜಾಲ ಸಕ್ರಿಯವಾಗಿದೆ ಎಂಬುದಕ್ಕೆ ಕೇರಳದಲ್ಲಿ ಸಿಕ್ಕ ಬರೋಬ್ಬರಿ 5 ಕ್ವಿಂಟಾಲ್ ಗಾಂಜಾ ಸಾಕ್ಷಿಯಾಗಿದ್ದು, ಕೇರಳ ಪೊಲೀಸರ ತನಿಖೆಯಿಂದ ಜಾಲ ಎಲ್ಲಿಯವರೆಗೆ ಹಬ್ಬಿದೆ ಎಂಬುದರ ಬಗ್ಗೆ ತಿಳಿದು ಬರಲಿದೆ.