ಬೀದಿ ಬದಿ ಮಹಿಳಾ ವ್ಯಾಪರಿಗಳಿಗೆ ಸಿಹಿಸುದ್ದಿ
1 min readಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ: ಅವಧಿ ವಿಸ್ತರಣೆ
ಚಿತ್ರದುರ್ಗ,ಜನವರಿ 07:
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರ ಮಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ.
2020-21ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಗಳಡಿ ಬಳಕೆಯಾಗದ ಅನುದಾನದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ವ್ಯಾಪಾರಿಗಳಿಗೆ ನಿಗದಿಂದ ರೂ.10,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಜಿಲ್ಲೆಗೆ ಪರಿಶಿಷ್ಟ ಜಾತಿ-37 ಮತ್ತು ಪರಿಶಿಷ್ಟ ಪಂಗಡಕ್ಕೆ 691 ಭೌತಿಕ ಗುರಿ ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಆಸಕ್ತವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮಹಿಳೆಯರು ಮಾತ್ರ ಅರ್ಹರು.
ನಿಬಂಧನೆಗಳು: ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರಾಡಳಿತ ಇಲಾಖೆಯಲ್ಲಿ ನೊಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ದೃಡೀಕರಿಸಿದ ದಾಖಲೆ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಖಾತೆ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು, ಐ.ಎಫ್.ಎಸ್.ಸಿ. ಕೋಡ್‍ನ ದಾಖಲೆ ಸಲ್ಲಿಸಬೇಕು. ಬಿ.ಪಿ.ಎಲ್. ಪಡಿತರ ಚೀಟಿ, ಆಧಾರ್‍ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಬೀದಿಬದಿ ವ್ಯಾಪಾರ ಮಾಡುತ್ತಿರುವ ಫಲಾನುಭವಿಯನ್ನೊಳಗೊಂಡ ಸ್ಥಳದ ಭಾವಚಿತ್ರ ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆದಾರ್ ಸಂಖ್ಯೆ ಜೋಡಣೆಯಾಗಿರಬೇಕು. ಯೋಜನೆಯಡಿ ಈ ಹಿಂದೆ ಸೌಲಭ್ಯ ಪಡೆದ ಮಹಿಳೆಯರು ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಗಳು ಲಭ್ಯವಿದ್ದು, ಅವರಿಂದ ಮುದ್ರಿತ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅರ್ಹ ದಾಖಲೆಗಳೊಂದಿಗೆ ಜನವರಿ 16 ರ ಸಂಜೆ 5.30 ರೊಳಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ 08194-235958, ಚಳ್ಳಕೆರೆ 08195-250291, ಹೊಳಲ್ಕೆರೆ 08191-275250, ಹೊಸದುರ್ಗ 08199-230212, ಹಿರಿಯೂರು 08193-263512, ಮೊಳಕಾಲ್ಮೂರು 08198-229565 ಕ್ಕೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.