ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ:ಅನೇಕ ಹಿರಿಯರ ತ್ಯಾಗ ಬಲಿದಾನ, ತತ್ವ ಸಿದ್ದಾಂತಗಳ ಮೇಲೆ ಕಟ್ಟಲಾಗಿರುವ ಬಿಜೆಪಿ ಯಲ್ಲಿ ಸದಸ್ಯರುಗಳಾಗಿದ್ದೇವೆಂದು ಹೇಳಿಕೊಳ್ಳುವುದೇ ಹೆಮ್ಮೆಯ ಸಂಗತಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ದಾವಣಗೆರೆ ರಸ್ತೆ ಹೆದ್ದಾರಿ ಹೊರವಲಯದಲ್ಲಿರುವ ಓಜಾಸ್ ಹೋಟೆಲ್ ಸಭಾಂಗಣದಲ್ಲಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿಗೆ ದೇಶ ಮುಖ್ಯವೇ ಹೊರತು ಅಧಿಕಾರವಲ್ಲ. ಅದೇ ಕಾಂಗ್ರೆಸ್ ಒಂದೇ ಮನೆತನಕ್ಕೆ ಸೀಮಿತವಾದ ಪಕ್ಷ. ಅದೇ ನಮ್ಮ ಪಕ್ಷಕ್ಕೂ ಬೇರೆ ಪಕ್ಷಗಳಿಗೂ ಇರುವ ವ್ಯತ್ಯಾಸ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅಧಿಕಾರ ನೀಡುವುದೇ ಬಿಜೆಪಿ.ಯ ವಿಶೇಷ. ಅದಕ್ಕಾಗಿಯೇ ಮೂರು ವರ್ಷಗಳಿಗೊಮ್ಮೆ ಪದಾಧಿಕಾರಿಗಳ ಬದಲಾವಣೆ ಮಾಡಲಿದೆ ಎಂದರು.
ಶ್ಯಾಂಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯ ಇವರುಗಳು ಕಟ್ಟಿ ಬೆಳೆಸಿದ ಪಕ್ಷ ಈಗ ಹೆಮ್ಮರವಾಗಿ ಬೆಳೆದಿದೆ. ನಾಯಕರುಗಳು ತಳಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸಿರುವುದರ ಪರಿಣಾಮ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಬಿಜೆಪಿ.ಅಧಿಕಾರ ಹಿಡಿಯಲು ಸಾಧ್ಯವಾಯಿತು. ಬ್ರಿಟೀಷರನ್ನು ದೇಶದಿಂದ ತೊಲಗಿಸಲು ಹುಟ್ಟಿಕೊಂಡ ಕಾಂಗ್ರೆಸ್ ಒಂದು ಸಂಘಟನೆಯೇ ವಿನಃ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ ಸಿಕ್ಕ ಮೇಲೆ ಕಾಂಗ್ರೆಸ್‌ನ್ನು ವಿಸರ್ಜಿಸುವಂತೆ ಮಹಾತ್ಮಗಾಂಧಿ ನೆಹರುಗೆ ಸೂಚಿಸಿದ್ದರು. ಆದರೆ ನೆಹರು ಕಾಂಗ್ರೆಸ್‌ನ್ನು ರಾಜಕೀಯ ಪಕ್ಷವನ್ನಾಗಿ ಬಳಿಸಿಕೊಂಡಿದ್ದರಿಂದ ಕಾಂಗ್ರೆಸ್ ಈಗ ಒಂದೇ ಕುಟುಂಬಕ್ಕೆ ಮೀಸಲಾಗಿದೆ ಎಂದು ಟೀಕಿಸಿದರು.
ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ನಮ್ಮ ಪಕ್ಷ ಅನೇಕ ಏಳು ಬೀಳುಗಳನ್ನು ಕಂಡಿದೆ. ವಾಜಪೇಯಿ, ಅದ್ವಾಣಿಯವರು ನಡೆದಾಡಿಕೊಂಡು ಬಿಜೆಪಿ.ಯನ್ನು ಕಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ ನೇ ವಿಧಿಯನ್ನು ಪ್ರಧಾನಿ ಮೋದಿ ರದ್ದುಗೊಳಿಸಿರುವುದು ಹಿಂದಿನ ನಾಯಕರುಗಳ ಕನಸಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರವನ್ನು ಇಂದಲ್ಲ ನಾಳೆ ವಶಪಡಿಸಿಕೊಳ್ಳುವ ಚಿಂತನೆ ಪ್ರಧಾನಿಯವರಲ್ಲಿದೆ. ಉತ್ತಮ ಚರಿತ್ರೆಯುಳ್ಳ ಬಿಜೆಪಿ. ತತ್ವ ಸಿದ್ದಾಂತವನ್ನು ಕಾರ್ಯಕರ್ತರು ಮತ್ತು ಮಂಡಲ ಪದಾಧಿಕಾರಿಗಳು ಮೈಗೂಡಿಸಿಕೊಳ್ಳುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ ಮಾತನಾಡಿ ಪಕ್ಷದ ನಾಯಕರುಗಳು ತಿಳಿಸುವ ವಿಚಾರಗಳನ್ನು ಬೂತ್ ಮಟ್ಟಕ್ಕೆ ತಲುಪಿಸುವುದೇ ಪ್ರಶಿಕ್ಷಣ ವರ್ಗದ ಉದ್ದೇಶ. ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ರಾಜ್ಯದ ಪದಾಧಿಕಾರಿಗಳು ಭಾಗವಹಿಸುತ್ತಾರೆ. ರಾಜ್ಯ ಮಟ್ಟದಲ್ಲಿ ನಡೆಯುವ ಪ್ರಶಿಕ್ಷಣ ವರ್ಗಕ್ಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಪಾಲ್ಗೊಳ್ಳುವರು. ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಮಂಡಲ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಹೇಳುವ ಪಕ್ಷದ ವಿಚಾರಗಳನ್ನು ಬೂತ್ ಮಟ್ಟಕ್ಕೆ ತಲುಪಿಸಿ ಪಕ್ಷವನ್ನು ಸಂಘಟಿಸುವುದು ಇದರ ಧ್ಯೇಯ ಎಂದು ವಿವರಿಸಿದರು.
ಪ್ರಶಿಕ್ಷಣ ವರ್ಗ ನಡೆಯುವುದು ಬಿಜೆಪಿ.ಯಲ್ಲಿ ಮಾತ್ರ. ಅದೇ ನಮ್ಮ ಪಕ್ಷಕ್ಕೂ ಇತರೆ ಪಕ್ಷಗಳಿಗೂ ಇರುವ ವ್ಯತ್ಯಾಸ. ಎರಡು ದಿನಗಳ ಕಾಲ ನಡೆಯುವ ಮಂಡಲ ಪ್ರಶಿಕ್ಷಣ ವರ್ಗದಲ್ಲಿ ತಿಳಿದುಕೊಳ್ಳುವ ವಿಚಾರಗಳನ್ನು ಬೂತ್ ಸಮಿತಿ ಮಟ್ಟಕ್ಕೆ ತಲುಪಿಸುವ ಕೆಲಸವಾಗಬೇಕು. ಅದಕ್ಕಾಗಿ ಇಲ್ಲಿ ಮುಖಂಡರುಗಳು ಹೇಳುವ ವಿಚಾರಗಳನ್ನು ಗಮನಕೊಟ್ಟು ಕೇಳಿ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಬಿಜೆಪಿ.ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ. ಇತಿಹಾಸ-ವಿಕಾಸ ಕುರಿತು ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡಿದರು.
ಓ.ಬಿ.ಸಿ.ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್ ನಮ್ಮ ಕಾರ್ಯ ಪದ್ದತಿ ಮತ್ತು ಸಂಘಟನೆಯ ರಚನೆಯಲ್ಲಿ ನಮ್ಮ ಪಾತ್ರ ಎಂಬ ವಿಷಯ ಕುರಿತು ವಿಚಾರ ಮಂಡಿಸಿದರು.
ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಮಂಡಲ ಉಸ್ತುವಾರಿ ಕಲ್ಲಂಸೀತಾರಾಮರೆಡ್ಡಿ, ಭೀಮಸಮುದ್ರದ ಅನಿತ್, ಜಿ.ಪಂ.ಸದಸ್ಯ ಕೆ.ಟಿ.ಗುರುಮೂರ್ತಿ ವೇದಿಕೆಯಲ್ಲಿದ್ದರು.
ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ವೀರೇಶ್ ಸ್ವಾಗತಿಸಿದರು.