ತ್ಯಾಜ್ಯ ವಿಂಗಡನೆ ಬಗ್ಗೆ ಜನರಿಗೆ ಅರಿವು ಮಾಡಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯ: ಜಿ. ಪಂ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು
1 min readಚಿತ್ರದುರ್ಗ, ಜನವರಿ30:
ಗ್ರಾಮೀಣ ಜನರಿಗೆ ತಾಜ್ಯ ವಿಂಗಡನೆ ಹಾಗೂ ವಿಲೆ ಮಾಡುವ ಕುರಿತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾದದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚ ಭಾರತ್ ಮಿಷನ್(ಗ್ರಾಮಿಣ) ಯೋಜನೆಯ “ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ” ಮೂಲದಲ್ಲಿಯೇ ತ್ಯಾಜ್ಯ ವಿಂಗಡನೆಯ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮನೆಗಳನ್ನು ಯಾವ ರೀತಿ ಸ್ವಚ್ಚವಾಗಿ ಇಟ್ಟುಕೊಳುತ್ತಿವೋ ಅದೇ ರೀತಿ ನಮ್ಮ ಗ್ರಾಮ, ಶಾಲೆ ಆವರಣ, ದೇವಸ್ಥಾನ, ರಸ್ತೆಗಳನ್ನು ಸ್ವಚ್ಚವಾಗಿ ಇಡುವುದು ನಮ್ಮೆಲ್ಲರ ಜವಾಬ್ದಾರಿ ಈ ನಿಟ್ಟಿನಲ್ಲಿ ಎಲ್ಲರಿಗೂ ಅರಿವನ್ನು ಮಾಡಿಸಬೇಕು. ಜನರು ಎಲ್ಲ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ, ಆದ್ದರಿಂದ ಪಿಡಿಒಗಳು ಹಸಿ ಕಸ, ಒಣಕಸ ಮತ್ತು ಪ್ಲಾಸ್ಟಿಕ್ ಬೇರ್ಪಡಿಸುವಂತೆ ಹಾಗೂ ಸ್ವಚ್ಚತೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು.
ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ತ್ಯಾಜ್ಯ ವಿಲೇವಾರಿ ಆಟೋಗಳು ಪ್ರತಿಯೊಂದು ಗ್ರಾಮ ಪಂಚಾಯಿತಿ, ಹಳ್ಳಿಗಳಿಗೆ ಹೋಗಿ ಪ್ರತಿಯೊಂದು ಮನೆ ಮನೆಗೆ ತೆರಲಿ ಸ್ವಚ್ಚತೆ, ಹಾಗೂ ತ್ಯಾಜ್ಯ ವಿಂಗಡನೆ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಿವೆ.
ತ್ಯಾಜ್ಯ ವಿಂಗಡನೆ ಮತ್ತು ಕಸ ವಿಲೇವಾರಿ ಬಗ್ಗೆ ಪೈಪ್ ಕಂಪೋಸ್ಟ್, ಎರೆಹುಳು ಘಟಕ, ನಡಾಫ್ ಮೆತೆಡ್, ನೈಲಾನ್ ಮೆಷ್ ಮೆತೆಡ್ (ತರೆಗೆಲೆ ಗೊಬ್ಬರ), ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾಡಿದ ಮಾದರಿಯನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಾಡಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ.
ತಿಪ್ಪೆಗಳು ಊರಿನ ಅಥವಾ ಮನೆಯ ಹತ್ತಿರ ಇರುವುದರಿಂದ ಅನೇಕ ರೋಗ ರುಜನಗಳು ಹರಡುತ್ತವೆ ಎಂದು ತಿಳಿಸಿ ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ತಿಪ್ಪೆಗಳನ್ನು ಊರಿನಿಂದ ಹೊರಗೆ ಹಾಕುವಂತೆ ಪಿಡಿಒಗಳು ಜನರಿಗೆ ಮನವರಿಕೆ ಮಾಡಿ ಕ್ರಮ ಕೈಗೊಳ್ಳಬೆಕು ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಬಹುತೇಕ ಮಹಿಳೆಯರು ಮತ್ತು ವಯೊವೃದ್ದರು ಬಯಲು ಬಹಿರ್ದೆಸೆಗೆ ಹೊಗುತ್ತಾರೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಅದ್ದರಿಂದ ಜನರು ಶೌಚಾಲಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ಮತ್ತು ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ನಂದಿನಿ ದೇವಿ ಮಾತನಾಡಿ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ರಾಮ, ಮನೆ, ದೇವಸ್ಥಾನ , ಸಂತೆ, ಜಾತ್ರೆಗಳಲ್ಲಿ ಆಯಾ ಸ್ಥಳದಲ್ಲೆ ಹಸಿ ಮತ್ತು ಒಣಕಸವನ್ನು ವಿಂಗಡನೆ ಮಾಡಬೇಕು. ಇದಕ್ಕೆ ಪಿಡಿಒಗಳು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ತ್ಯಾಜ್ಯ ವಿಂಗಡನೆ ಬಗ್ಗೆ ಅರಿವು ಮೂಡಿಸಿ ತಿಳಿಸಬೇಕು.
ನಮ್ಮ ಗ್ರಾಮ ನಮ್ಮ ಜವಾಬ್ದಾರಿ ಎಂಬ ನಿಟ್ಟಿನಲ್ಲಿ ಇಂದಿನಿಂದಲ್ಲೆ ನಮ್ಮ ಮನೆ ನಮ್ಮ ಜವಾಬ್ದಾರಿ. ನಮ್ಮ ಕಸ ನಮ್ಮ ಜವಾಬ್ದಾರಿ ಎಂದು ಮನೆಯಿಂದಲೇ ಜಾಗೃತಿ ಆಂದೋಲವನ್ನು ಆರಂಭಿಸೋಣ ಎಂದು ಹೇಳಿದರು.
ಜಿಲ್ಲೆಯಲ್ಲಿ 189 ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ 61 ಗ್ರಾಮ ಪಂಚಾಯಿತಿಗೆ ಅನುಮೋದನೆ ಸಿಕ್ಕಿದೆ. 23 ಘನ ತ್ಯಾಜ್ಯ ವಿಲೇವಾರಿ ಘಟಕಗಳು ನಿರ್ಮಾಣ ಹಂತದಲಿವೆ. ಜಿಲ್ಲಾ ಪಂಚಾಯಿತಿಯಿಂದ 4 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 2 ಕೋಟಿ ಹಣ ಖರ್ಚಾಗಿದೆ. 23 ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಮಾಡಲಾಗಿದೆ. 23 ಘನ ತ್ಯಾಜ್ಯ ವಿಲೇವಾರಿ ಆಟೋಗಳನ್ನು ಬಿಡುಗಡೆಮಾಡಲಾಗಿದ್ದು, ಇನ್ನು 62 ಆಟೋಗಳ ಖರೀದಿಗೆ ಹಣ ಬಿಡುಗಡೆಯಾಗಿದೆ. ಸದ್ಯದಲ್ಲೆ ಆಟೋಗಳ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿಯೂ ಸಹ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆ.
ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಹಿರಿಯೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆನಂದಕುಮಾರ್, ಜಿಲ್ಲಾ ಪಂಚಾಯತ್ ವಿವಿಧ ಇಲಾಖೆಯ ಮುಖ್ಯಸ್ಥರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.
=====