ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ರೌಂಡ್ಸ್.
1 min read
=======
ಆಡುಮಲ್ಲೇಶ್ವರ ಕಿರು ಮೃಗಾಲಯ ವೀಕ್ಷಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಕಿರು ಮೃಗಾಲಯ ಅಭಿವೃದ್ಧಿಗೆ ಬದ್ಧ.
****
ಚಿತ್ರದುರ್ಗ,ಫೆಬ್ರವರಿ08:
ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ರೂ.3.12 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದರ ಜೊತೆಗೆ ಡಿಎಂಎಫ್ ನಿಧಿಯಿಂದಲೂ ರೂ.3.50 ಕೋಟಿ ನೀಡಲಾಗಿದ್ದು, ಆಡುಮಲ್ಲೇಶ್ವರ ಕಿರು ಮೃಗಾಲಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ಸೋಮವಾರ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ ವ್ಯಾಪ್ತಿಯ ಆಡುಮಲ್ಲೇಶ್ವರ ಕಿರುಮೃಗಾಲಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ವಲಯ ಅರಣ್ಯ ಕಚೇರಿ, ಕರಡಿ ಮನೆ, ಚುಕ್ಕೆ ಜಿಂಕೆ ಮನೆ ನಿರ್ಮಾಣ, ಚೈನ್‍ಲಿಂಗ್ ಮೆಶ್, ಪ್ರವೇಶದ್ವಾರ, ಚಿರತೆ, ಕೃಷ್ಣಾಮೃಗ, ಝೀಬ್ರಾ ಆವರಣ, ರಸ್ತೆ ನಿರ್ಮಾಣ, ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಒಟ್ಟು ರೂ.3.12 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಆಡುಮಲ್ಲೇಶ್ವರ ಕಿರುಮೃಗಾಲಯದ ನಿರ್ವಹಣೆ, ಅಭಿವೃದ್ಧಿ ಕಾಮಗಾರಿ, ಆಸ್ಪತ್ರೆ ಖರ್ಚು ವಿವರ ಸೇರಿದಂತೆ 2018-19ನೇ ಸಾಲಿನಿಂದ 2020-21ನೇ ರವರೆಗೆ ಒಟ್ಟು ರೂ.1.73 ಕೋಟಿ ಖರ್ಚಾಗಿದೆ. 2018-19ರಲ್ಲಿ ರೂ.21,76,090 ಲಕ್ಷ, 2019-2020ರಲ್ಲಿ ರೂ.26,86,705 ಲಕ್ಷ ಹಾಗೂ 2020-21ರಲ್ಲಿ ರೂ.13,77,200 ಲಕ್ಷ ರೂಗಳು ಆಡುಮಲ್ಲೇಶ್ವರ ಮೃಗಾಲಯಕ್ಕೆ ಆದಾಯ ಬಂದಿದೆ.
ಪ್ರಾಣಿದತ್ತು ಸ್ವೀಕಾರದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ: ಪ್ರಾಣಿದತ್ತು ಸ್ವೀಕಾರದ ಕುರಿತು ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ, ವನ್ಯಜೀವಿ ಪ್ರೇಮಿಗಳಿಗೆ ಮಾಹಿತಿ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಪ್ರೇಮಿಗಳು ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಮುಂದೆ ಬರಲಿದ್ದಾರೆ. ಇದರಿಂದ ಮೃಗಾಲಯ ಸ್ವಾವಲಂಬಿಯಾಗಿ ರೂಪುಗೊಳ್ಳಲು ಅನುಕೂಲವಾಗಲಿದೆ ಎಂದರು.
ನಗರ ಸಾರಿಗೆ ವ್ಯವಸ್ಥೆಗೆ ಕ್ರಮ: ಆಡುಮಲ್ಲೇಶ್ವರಕ್ಕೆ ಆಟೋದಲ್ಲಿ ಹೋಗಿ ಬರುವುದು ದುಬಾರಿಯಾಗಲಿದೆ. ಹಾಗಾಗಿ ಸ್ಥಳೀಯರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಡಿಪೋ ವ್ಯವಸ್ಥಾಪಕರೊಂದಿಗೆ ಚರ್ಚಿಸಿ, ನಗರ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಇದರಿಂದ ಮೃಗಾಲಯಕ್ಕೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.
ವಲಯ ಅರಣ್ಯಾಧಿಕಾರಿ ವಸಂತಕುಮಾರ್ ಮಾತನಾಡಿ, ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಇನ್ನಷ್ಟು ಆಕರ್ಷಣಿಯಗೊಳಿಸುವ ಉದ್ದೇಶದಿಂದ ಒಂದು ಗಂಡು ಹಾಗೂ ಎರಡು ಹೆಣ್ಣು ಝೀಬ್ರಾ ಸೇರಿದಂತೆ ಒಟ್ಟು 3 ಝೀಬ್ರಾಗಳು ಮೃಗಾಲಯಕ್ಕೆ ಆಗಮಿಸಲಿವೆ. ಇಂಟರ್ ನ್ಯಾಷನಲ್ ಯೂನಿಯನ್ ಕನ್ಸ್‍ರ್‍ವೇಷನ್ ವತಿಯಿಂದ ಅನುಮತಿ ನೀಡಿದ ತಕ್ಷಣ ಕ್ವಾರಂಟೈನ್ ಮಾಡಿ ಆರು ತಿಂಗಳೊಳಗೆ ಮೃಗಾಲಯಕ್ಕೆ ತೆಗೆದುಕೊಂಡು ಬರಲಾಗುವುದು. ಹುಲಿ ಮನೆ ಆವರಣ ನಿರ್ಮಾಣವಾದ ನಂತರ 2 ಹುಲಿಗಳು, ಮೊಸಳೆ, ಸಿಂಗಳಿಕ ಮಂಗಗಳು, ಪಕ್ಷಿಗಳು ಸೇರಿದಂತೆ ವಿವಿಧ ವನ್ಯಜೀವಿಗಳು ಮೃಗಾಲಯಕ್ಕೆ ಬರಲಿವೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಅರಣ್ಯ ಇಲಾಖೆ ಹಾಗೂ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಆಡುಮಲ್ಲೇಶ್ವರ ಕಿರುಮೃಗಾಲಯ ವೀಕ್ಷಿಸಿದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಡಿಸಿಎಫ್ ಚಂದ್ರಶೇಖರ್ ನಾಯಕ್ ಇದ್ದರು.