March 3, 2024

Chitradurga hoysala

Kannada news portal

ತತ್ವಪದ ಕಲಾವಿದೆ ಮಾರಕ್ಕಗೆ 2021ರ ರಾಜ್ಯ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ.

1 min read

ಚಿತ್ರದುರ್ಗ – ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ಚಿಕ್ಕೋಬನಹಳ್ಳಿ ಗ್ರಾಮದ ತತ್ವಪದ ಕಲಾವಿದೆ ಮಾರಕ್ಕ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ನೀಡುವ ಜಾನಪದ ಲೋಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀ ಶಿವ ಶರಣ ಹರಳಯ್ಯ ಭಜನಾ ಮಂಡಳಿಯ ಮೂಲಕ ತತ್ವಪದ ಕಾರ್ಯಕ್ರಮ ನೀಡುತ್ತಿದ್ದು ಸಂತ ಶ್ರೇಷ್ಠ ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ವತಿಯಿಂದ ವಿಜಯಪುರ ನಗರದಲ್ಲಿ ಜರುಗಿದ ಮಹಿಳಾ ತತ್ವಪದಕಾರರ ಸಂಗಮ ಕಾರ್ಯಾಲಯದಲ್ಲಿ ತಮ್ಮ ತಂಡದೊಂದಿಗೆ ಭಾಗವಹಿಸಿ ಕಲಾ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿರುವುದಲ್ಲದೆ ನಾಡಿನ ವಿವಿಧ ಮಠಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜನಪರ ಉತ್ಸವ, ಮಹಿಳಾ ಉತ್ಸವ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
2016 ರಲ್ಲಿ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಕರ್ನಾಟಕ ಜಾನಪದ ಪರಿಷತ್ತು ಪ್ರತಿ ವರ್ಷ  ಜಾನಪದ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಿಗೆ ನೀಡುವ ಜಾನಪದ ಲೋಕ ರಾಜ್ಯ ಪ್ರಶಸ್ತಿಯು ಹತ್ತು ಸಾವಿರ ನಗದು ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಲಾಗುತ್ತಿದ್ದು ಇದೇ ತಿಂಗಳ ಹದಿಮೂರನೇ ತಾರೀಖಿನಂದು ರಾಮನಗರ ಜಿಲ್ಲೆಯ ಜಾನಪದ ಲೋಕದಲ್ಲಿ ಹಮ್ಮಿಕೊಂಡಿರುವ ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಾಲಯದಲ್ಲಿ  ತತ್ವಪದ ಕಲಾವಿದೆ ಮಾರಕ್ಕರವರನ್ನು ಅಭಿನಂದಿಸಲಾಗುವುದೆಂದು ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ನಿವೃತ್ತ ಐ.ಎ.ಎಸ್‌ ಅಧಿಕಾರಿ ಟಿ.ತಿಮ್ಮೇಗೌಡ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಜಾನಪದ ಕಲಾವಿದೆ ಮಾರಕ್ಕರವರನ್ನು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಧಾನ ಕಾರ್ಯದರ್ಶಿ ನಿರಂಜನ ದೇವರಮನಿ ಜಿಲ್ಲಾ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಪಿ.ತಿಪ್ಪೇಸ್ವಾಮಿ ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *