September 17, 2024

Chitradurga hoysala

Kannada news portal

ನಿಗಮ ಮಂಡಳಿ ಬೆನ್ನಲ್ಲೇ ಬಂಡಾಯದ ಮಾತು ಎಲ್ಲೆಲ್ಲಿ

1 min read

ಬೆಂಗಳೂರು : ಬಿಜೆಪಿ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮಾರಚಣೆ ಸಂದರ್ಭದಲ್ಲಿ ಸಣ್ಣಪುಟ್ಟ ಅಸಮಾಧಾನ ತಣಿಸಲು ಸಿಎಂ ಯಡಿಯೂರಪ್ಪ ಅವರು ಮಾಡಿದ್ದ ಪ್ರಯತ್ನ ಉಲ್ಟಾ ಹೊಡೆದಿದೆ. ಬಿಜೆಪಿ ಶಾಸಕರು ಸಮಾಧಾನವಾಗುವ ಬದಲು ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಿನ್ನೆಗೆ ಒಂದು ವರ್ಷವಾಯಿತು. ಇವತ್ತು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಎದುರಿಸಿದ್ದ ಸವಾಲುಗಳ ಬಗ್ಗೆ ನಾಡಿನ ಜನತೆಗೆ ವಿವರಿಸಿದ್ದರು. ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕಣ್ಣಲ್ಲಿ ನೀರು ಬರುತ್ತಿದೆ ಎಂದೂ ಹೇಳಿದ್ದರು. ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿರುವುದನ್ನು ವಿವರಿಸಿದ್ದರು. ಸರ್ಕಾರಕ್ಕೆ ಒಂದು ವರ್ಷವಾಗಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕರ ಅಸಮಾಧಾನ ತಣಿಸಲೂ ಸಿಎಂ ಮುಂದಾಗಿದ್ದರು. 

ಶಾಸಕರಿಗೆ ಕೊಡುಗೆ ನೀಡಿದ ಬಿಎಸ್ ವೈ

ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಾಸಕರನ್ನು ಮತ್ತೊಮ್ಮೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ಮುಂದಾಗಿದ್ದರು. ಹೀಗಾಗಿ ಬಿಜೆಪಿಯ 24 ಶಾಸಕರಿಗೆ ನಿಗಮ-ಮಂಡಳಿಗಳನ್ನು ಹಂಚಿಕೆ ಮಾಡಿ ಆದೇಶ ಮಾಡಿದ್ದರು.
ಆ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರ ಅಸಮಾಧಾನ ತಣಿಸುವುದು ಮುಖ್ಯಮಂತ್ರಿಗಳ ಉದ್ದೇಶವಾಗಿತ್ತು. ಜೊತೆಗೆ ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಾಸಕರಿಗೆ ಕೊಡುಗೆ ಕೊಡಲು ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಮಾಡಿದ್ದರು. ಆದರೆ ನಿಗಮ-ಮಂಡಳಿಗಳಿಗೆ ನೇಮಕದಿಂದ ಬಿಜೆಪಿಯಲ್ಲಿನ ಅಸಮಾಧಾನ ತಣಿಯುವ ಬದಲು ಬಹಿರಂಗವಾಗಿ ಸ್ಫೋಟವಾಗಿದೆ. ಹೀಗಾಗಿ ಒಂದು ಗಂಟೆಯಲ್ಲಿಯೇ ತಮ್ಮ ನೇಮಕದ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.

      4 ಶಾಸಕರ‌ ಆದೇಶ ಹಿಂಪಡೆದಿದೆ

ಬಿಜೆಪಿಯ 24 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಮಾಡಿದ್ದರು. ಅದಾದ ಒಂದು ಗಂಟೆಯಲ್ಲಿಯೇ ಮತ್ತೊಂದು ಆದೇಶ ಹೊರಡಿಸಿರುವ ಸಿಎಂ, ನಿಗಮ ಮಂಡಳಿಗಳಿಗೆ ನೇಮಕಾತಿಯಿಂದ ನಾಲ್ವರು ಶಾಸಕರನ್ನು ಕೈಬಿಟ್ಟಿದ್ದಾರೆ.
ಡಿ. ದೇವರಾಜು ಅರಸು ನಿಗಮಕ್ಕೆ ನೇಮಕ ಮಾಡಲಾಗಿದ್ದ ಚಿತ್ರದುರ್ಗದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕೆಎಸ್‌ಎಫ್‌ಸಿಗೆ ನೇಮಕ ಮಾಡಲಾಗಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಲಾಗಿದ್ದ ಕಾಪು ಕ್ಷೇತ್ರದ ಲಾಲಾಜಿ ಆರ್. ಮೆಂಡನ್ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ನೇಮಕ ಮಾಡಿದ್ದ ಬಸವರಾಜ್ ದಢೇಸೂರ್ ಅವರನ್ನು ನೇಮಕ ಮಾಡಿದ್ದ ಆದೇಶವನ್ನು ಯಡಿಯೂರಪ್ಪ ಅವರು ಹಿಂದಕ್ಕೆ ಪಡೆದಿದ್ದಾರೆ.ಅಸಮಾಧಾನ ಸ್ಫೋಟ
ಮಂತ್ರಿಸ್ಥಾನದ ಆಕಾಂಕ್ಷಿಯಾದ್ದವರಿಗೆ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರಿಂದ ಶಾಸಕರಲ್ಲಿ ಅಸಮಾಧಾನ ಸ್ಫೋಟವಾಗಿದೆ. ಚಿತ್ರದುರ್ಗದಲ್ಲಿ ಅಸಮಾಧಾನ ಹೊರಹಾಕಿರುವ ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು, ನನ್ನ ನಿರೀಕ್ಷೆಯೇ ಬೇರೆ ಇತ್ತು. ನನಗೆ ನಿಗಮ ಮಂಡಳಿ ಸ್ಥಾನ ಬೇಕಾಗಿಲ್ಲ. ನನಗೆ ಅವಮಾನ ಮಾಡಲೆಂದೇ ಈ ಸ್ಥಾನ ನೀಡಲಾಗಿದೆ. ಇದು ನನಗೆ ನೋವಿನ ಸಂಗತಿ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ.
ನಾನು ಬೆಂಗಳೂರಿಗೆ ಹೋಗಿ ಮಾತನಾಡಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರಿಗೆ ನೂರಾರು ಸಮಸ್ಯೆಗಳಿವೆ. 1994ರಲ್ಲೇ ನಾನು ಗೃಹಮಂಡಳಿ ಅಧ್ಯಕ್ಷನಾಗಿದ್ದವನು. ನಾನು ಕೇಳದಿದ್ದರೂ ಜೆ.ಎಚ್. ಪಟೇಲರು ನನಗೆ ಗೃಹಮಂಡಳಿ ಸ್ಥಾನ ನೀಡಿದ್ದರು. ನನಗೆ ಬಹಳ ಅವಮಾನವಾಗಿದೆ, ರಾಜಕೀಯಕ್ಕೆ ಬಂದಿದ್ದೇ ತಪ್ಪು ಎಂಬ ಭಾವನೆ ಬಂದಿದೆ ಎಂದು ಸರ್ಕಾರದ ಒಂದು ವರ್ಷದ ಸಂಭ್ರಮದ ದಿನವೇ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ಅಂದಾಭಿಮಾನಿ

ನಾನು ಸಿಎಂ ಯಡಿಯೂರಪ್ಪ ಅವರ ಅಂದಾಭಿಮಾನಿ ಎಂದು ಹಾಸನ ಶಾಸಕ ಪ್ರೀತಮ್ ಗೌಡ ಅವರು ಅರಣ್ಯ ವಸತಿ ಮತ್ತು ವಿಹಾರ ಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.
ನಾನು ನಿಗಮ ಮಂಡಳಿ ಆಸೆ ಆಕಾಂಕ್ಷಿ ಅಲ್ಲ. ನನಗೆ ಈ ಸ್ಥಾನ ನೀಡಿದಕ್ಕೆ ಸಿಎಂಗೆ ಧನ್ಯವಾದ ಹೇಳುತ್ತೇನೆ. ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ನೀಡಲಿ. ನಾನು ಯಡಿಯೂರಪ್ಪ ನವರ ಅಂದಾಭಿಮಾನಿ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ನಾನು ಮೊದಲ ಬಾರಿಗೆದ್ದವನು. ನನಗೆ ಯಾವ ಆಸೆಯೂ ಇಲ್ಲ. ಸಿಎಂ ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಇನ್ನು ಮೂರು ವರ್ಷ ಸುಭದ್ರವಾಗಿರಬೇಕು. ನನಗಿನ್ನು 38-39 ವರ್ಷ. ಇನ್ನೂ 49 ವರ್ಷದ ತನಕ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ. 

ಮತ್ತಷ್ಟು ಅಸಮಧಾನ

ಅವರೊಂದಿಗೆ ನಿಗಮ ಮಂಡಳಿ ಬಗ್ಗೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ತಮ್ಮ ಆಪ್ತರಲ್ಲಿ ಮಾತನಾಡಿರುವ ಅವರು ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ.
ಜೊತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ್ ಅವರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಶಾಸಕ ನೆಹರು ಓಲೇಕಾರ ಅವರನ್ನು ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಗೊಳಿಸಿ ಸಿಎಂ ಆದೇಶ ಹೊರಡಿಸಿದ್ದರು. ನಾನು ಈ ಬಗ್ಗೆ ಈಗಲೇ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಾಳೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮುಂದೆ ಏನೂ ಮಾಡಬೇಕು ಎಂಬುದನ್ನು ನಿರ್ಧಾರ ಮಾಡುತ್ತೇನೆ. ಆ ಬಳಿಕ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.
ಒಟ್ಟಾರೆ ಕೋವಿಡ್ ಸಂಕಷ್ಟ ಕಾಲದಲ್ಲಿ ಬಿಳಿ ಆನೆ ಎಂದೆ ಕರೆಯಲ್ಪಡುವ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಯಡಿಯೂರಪ್ಪ ಅವರು ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದ ಕಾಲದಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡಿರುವುದನ್ನು ವಿರೋಧ ಪಕ್ಷಗಳೂ ವಿರೋಧಿಸಿವೆ.

About The Author

Leave a Reply

Your email address will not be published. Required fields are marked *