April 26, 2024

Chitradurga hoysala

Kannada news portal

ಬಸವಾದಿ ಶಿವಶರಣರೇ ನಿಜವಾದ ಬಂಡಾಯ ಸಾಹಿತಿಗಳು, ದಲಿತ ಹೋರಾಟಗಾರರು ವೈಚಾರಿಕ ಪ್ರಜ್ಞೆಯುಳ್ಳವರು : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

1 min read

ಬಸವಾದಿ ಶಿವಶರಣರೇ ನಿಜವಾದ ಬಂಡಾಯ ಸಾಹಿತಿಗಳು, ದಲಿತ ಹೋರಾಟಗಾರರು ವೈಚಾರಿಕ ಪ್ರಜ್ಞೆಯುಳ್ಳವರು : ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ. _________________________ ಸಾಣೇಹಳ್ಳಿ, ಅಗಸ್ಟ್ 3; ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಆಯೋಜಿಸಿರುವ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಕನ್ನಡಾಂಬೆ ಬಂಜೆಯಲ್ಲ ಎನ್ನುವ ಮಾತಿಗೆ 12 ನೆಯ ಶತಮಾನದ ಶರಣ-ಶರಣೆಯ ಬದುಕು ಉತ್ತರವಾಗಬಲ್ಲುದು. ಇಂದು ಬಂಡಾಯ, ದಲಿತಪ್ರಜ್ಞೆ, ವೈಚಾರಿಕ ಪ್ರಜ್ಞೆಯ ಸಾಹಿತಿಗಳು ಎಂದು ಗುರುತಿಸುವೆವು. ಆದರೆ ಬಸವಾದಿ ಶಿವಶರಣರೇ ನಿಜವಾದ ಬಂಡಾಯ ಸಾಹಿತಿಗಳು, ದಲಿತ ಹೋರಾಟಗಾರರು ವೈಚಾರಿಕ ಪ್ರಜ್ಞೆಯುಳ್ಳವರು ಎಂದರೆ ಅತಿಶಯೋಕ್ತಿಯಲ್ಲ. ಕಾಳವ್ವೆಯ ವಚನಗಳಲ್ಲಿ ಇವೆಲ್ಲವುಗಳನ್ನೂ ಕಾಣಬಹುದು. ಶರಣರದ್ದು ತೋರಿಕೆಯ ಬಂಡಾಯವಲ್ಲ; ತನು, ಮನ, ಹೃದಯಪೂರ್ವಕವಾದದ್ದು. ಕಾಳವ್ವೆ ಅಸ್ಪøಶ್ಯ, ದಲಿತ ಮಹಿಳೆ. ಸಾತ್ವಿಕ ಗುಣವುಳ್ಳವಳು. ಪತಿ ಉರಿಲಿಂಗಪೆದ್ದಿ ಅನುಭಾವಿಗಳು. ಈಕೆಯ 12 ವಚನಗಳು ದೊರೆತಿವೆ. ಇವುಗಳಲ್ಲಿ ತನ್ನ ನೋವನ್ನು, ಜೀವಪರಕಾಳಜಿ, ಬಂಡಾಯ ಪ್ರಜ್ಞೆಯ, ಮೌಢ್ಯವಿರೋಧಿ ನಿಲುವುಗಳ ಮೂಲಕ ಸಮಾಜದ ಹುಳುಕುಗಳನ್ನು ಬಯಲಿಗೆಳೆದಿದ್ದಾರೆ. ನಡೆ-ನುಡಿಗಳಲ್ಲಿ ಒಂದಾಗಿ ಬಾಳುವುದೇ ಆದರ್ಶ ಬದುಕು. ಆಶೆ ಆಮಿಷಗಳಿಗೆ ಬಲಿಯಾಗಿ ಒಳ್ಳೆಯವರೂ ಕೆಟ್ಟವರಾಗುತ್ತಿರುವುದು ದುರದೃಷ್ಟಕರ ಸಂಗತಿ. ಹೀಗಾಗಿಯೇ ಮತ್ತೆ ಮತ್ತೆ ನಾವು ಬಸವಾದಿ ಶಿವಶರಣರ ಬದುಕು-ಬರಹಗಳ ಕಡೆ ಮುಖಮಾಡಬೇಕು. ಆಗ ಮತ್ತೆ ಕಲ್ಯಾಣ ಸಾಧ್ಯವಾಗುತ್ತದೆ.
ಕಾಳವ್ವೆ ಧರ್ಮ ದೇವರ ಹೆಸರಿನಲ್ಲಿ ಹೋಮವನ್ನಾಚರಿಸುವ, ಪ್ರಾಣಿಬಲಿ ನೀಡಿ ಆ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಬ್ರಾಹ್ಮಣ್ಯದ ಪರಂಪರೆಯನ್ನು ಕಟುವಾಗಿ ಖಂಡಿಸುವಳು. ಇಂಥವುಗಳಿಗೆ ಬಲಿಕೊಡುವುದು ಕುರಿ, ಕೋಣ, ಕೋಳಿಗಳಂತಹ ಅಮಾಯಕ ಪ್ರಾಣಿಗಳನ್ನೇ ಹೊರತು; ಹುಲಿ, ಸಿಂಹ, ಕರಡಿಯಂಥ ಕ್ರೂರಪ್ರಾಣಿಗಳನ್ನಲ್ಲ ಎನ್ನುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಬಲಿಕೊಡಬೇಕಾದ್ದು ಮನುಷ್ಯನಲ್ಲಿರುವ ಸ್ವಾರ್ಥ, ದ್ವೇಷ, ಹಿಂಸೆಯಂಥ ದುರ್ಗುಣಗಳನ್ನು.
ವಚನಕಾರರ ಆದ್ಯತೆ ಕಾಯಕಕ್ಕೆ. ಭಕ್ತಿ ಬಾಹ್ಯ ತೋರಿಕೆಯ ಆಚರಣೆಗಳಲ್ಲಿ ಇಲ್ಲ; ಸತ್ಯಶುದ್ಧವಾದ ಕಾಯದಲ್ಲಿದೆ. ಆಶಾ ಪಾಶದಿಂದ ಮುಕ್ತವಾಗುವುದೇ ನಿತ್ಯಮುಕ್ತಿ. ಎಂದು ಕಾಳವ್ವೆ ಹೇಳುವಳು. ಇದರಂತೆ ನಾವು ಬದುಕಿದರೆ ಸಮಾನತೆ ಕಾಣಲು ಸಾಧ್ಯ. ವಚನಕಾರರು ಆಹಾರದ ಬಗ್ಗೆ ಸಂಯಮದಿಂದ ಮಾತನಾಡಿದ್ದರೆ. ಹಿಂಸೆಯಿಂದ ಪ್ರಾಣಿವಧೆ ಮಾಡಿ ಮಾಂಸ ತಿನ್ನುವುದನ್ನು ಬಸವಾದಿ ಶರಣರು ಒಪ್ಪುವುದಿಲ್ಲ. ಕಾಳವ್ವೆ ಆಹಾರ ವ್ಯಕ್ತಿಗತ ಬದುಕಿಗೆ ಸಂಬಂಧಿಸಿದ್ದು. ಸತ್ತ ಪ್ರಾಣಿಗಳನ್ನು ತಿನ್ನುವವರು ಮೇಲೋ, ಕೊಂದು ತಿನ್ನುವವರು ಮೇಲೋ ಎಂದು ಪ್ರಶ್ನಿಸುತ್ತಾಳೆ. ಹುಟ್ಟಿನ ಕಾರಣಕ್ಕಾಗಿ ಯಾರೂ ಶ್ರೇಷ್ಠ, ಕನಿಷ್ಠವಾಗುವುದಿಲ್ಲ; ಸಂಸ್ಕಾರಕ್ಕೆ ತಕ್ಕನಾಗಿ ಶ್ರೇಷ್ಠ, ಕನಿಷ್ಠನೆಂದು ಪರಿಗಣಿಸಬಹುದು. ಯೋಗ್ಯ ಗುರುವಿಗೆ ತನು, ಮನ, ಧನವನ್ನು ನೀಡಬೇಕು. ಜಂಗಮ ಅರಿವು ಆಚಾರವುಳ್ಳವನಾಗಿ ಭಕ್ತನ ಕೈ ಹಿಡಿದು ಮುನ್ನಡೆಸಬೇಕು. ಸದಾಚಾರಿ ಭಕ್ತ. ದುರಾಚಾರಿ ಭವಿ ಎನ್ನುವ ಕಾಳವ್ವೆ ಎಚ್ಚೆತ್ತ ಚೇತನ. ಸಾಮಾಜಿಕ ಅಸಮಾನತೆಗಳ ವಿರುದ್ಧ ದ್ವನಿ ಎತ್ತಿರುವುದು ಕಾಳವ್ವೆಯ ದಿಟ್ಟತನವನ್ನು ತೋರುವುದು. ಪ್ರತಿಯೊಂದು ಊರುಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದರ ಬದಲಾಗಿ ಅನುಭವ ಮಂಟಪ ನಿರ್ಮಾಣವಾದರೆ ಕಳವ್ವೆಯಂಥ ಶರಣೆಯರು ಬೆಳಕಿಗೆ ಬರುಲು ಸಾಧ್ಯ ಎಂದರು.

ಉಪನ್ಯಾಸ ಮಾಲಿಕೆಯಲ್ಲಿ `ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ’ ವಿಷಯ ಕುರಿತಂತೆ ಬಾಗಲಕೋಟೆಯ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಶಶಿಕಲಾ ಎಂ ಮೊರಬದ ಮಾತನಾಡಿ ವಚನಕಾರರು ವ್ಯವಸ್ಥೆಯನ್ನು ಪ್ರಶ್ನಿಸಿದ್ದಲ್ಲದೆ ಮುರಿದು ಕಟ್ಟುವ ಕ್ರಿಯೆಯಲ್ಲಿ ತೊಡಗಿದವರು. ಅವರಲ್ಲಿ ತಳವರ್ಗದಿಂದ ಬಂದ, ಏಕೈಕ ದಲಿತ ವಚನಕಾರ್ತಿ ಕಾಳವ್ವೆ. ಸಂಸ್ಕೃತವನ್ನು ಕಲಿತಾಕೆ. ಸನ್ನಧಾರೆಯ ವಚನಕಾರ್ತಿಯರಲ್ಲಿ ಮುಖ್ಯಳು. ಈಕೆ ಅಸಮಾನತೆಯ ಪ್ರತೀಕವಾದ ಜಾತಿ, ಲಿಂಗ, ಧರ್ಮ, ಸಾಮಾಜಿಕ ವ್ಯವಸ್ಥೆಗಳನ್ನು ತನ್ನ ವಚನಗಳ ಮೂಲಕ ಪ್ರಶ್ನಿಸುವಳು. ಕಾಳವ್ವೆ ವ್ರತದ ಬಗ್ಗೆ ಮಾತನಾಡುತ್ತ ವ್ರತ ನಾಯಕರತ್ನ, ಬೆಲೆಬಾಳುವ ಮುತ್ತು, ಜೀವನಕ್ಕೆ ನೈತಿಕ ಶಕ್ತಿಯನ್ನು ಕೊಡುತ್ತದೆ. ವ್ರತ ಇಷ್ಟಲಿಂಗದ ಕಳೆಯಿದ್ದಂತೆ. ಪಾಲಿಸದಿದ್ದರೆ ಕಳೆಯಿಲ್ಲದ ಶರೀರ ಅಂದರೆ ಪ್ರಾಣವಿಲ್ಲದ ದೇಹದಂತಾಗುವುದು ಎನ್ನುವಳು. ಯಾಜಮಾನ್ಯ ಸಂಸ್ಕøತಿ ಕಟ್ಟಿಕೊಟ್ಟ ಇಂಥ ವ್ರತವನ್ನು ಮೇಲ್ವರ್ಗದವರು ಪಾಲಿಸುವಲ್ಲಿ ವಿಫಲರಾದುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವಳು. ಅಸಮಾನತೆಯ, ತರತಮದ ಚಿಂತನೆಗಳನ್ನು ಆಕೆ ತೀವ್ರವಾಗಿ ಪ್ರಶ್ನಿಸುವಳು. ಜೊತೆಗೆ ಯಾವುದು ಸರಿ ಎನ್ನುವ ತಿಳುವಳಿಕೆಯನ್ನು ಏಕಕಾಲಕ್ಕೆ ನೀಡುವಳು. ಪ್ರತಿಯೊಬ್ಬರ ಜೀವಶಕ್ತಿ ಆಹಾರ. ಇವತ್ತಿಗೂ ಕೂಡ ಸಸ್ಯಾಹಾರ ಮೇಲೋ, ಮಾಂಸಾಹರ ಮೇಲೋ ಎನ್ನುವ ತರ್ಕಗಳು ನಡೆಯುತ್ತಲೇ ಇದೆ. ಇದಕ್ಕೆ ಉತ್ತರವೆಂಬಂತೆ ಆಕೆ ನಮ್ಮ ನಡವಳಿಕೆಗಳು, ಆಚರಣೆಗಳು ನಮ್ಮನ್ನು ಮೇಲು, ಅಥವ ಕೀಳನ್ನಾಗಿಸುತ್ತವೆಯೇ ಹೊರತು ತಿನ್ನುವ ಆಹಾರವಲ್ಲ ಎನ್ನುವಳು. ತಿನ್ನುವ ಆಹಾರದ ಮೂಲಕ ಜನರನ್ನು ಮೇಲು, ಕೀಳು ಎಂದು ವಿಭಜಿಸುವ ಬುದ್ಧಿಗೇಡಿ ಬ್ರಾಹ್ರಾಹ್ಮಣ್ಯವನ್ನು ಪ್ರಶ್ನಿಸುತ್ತಾಳೆ. ಹಿಂಸೆಗೆ ಪ್ರೇರಕರಾದ ಬ್ರಾಹ್ಮಣರು ಇನ್ನೊಬ್ಬರನ್ನು ಕೀಳು ಎಂದು ಹೇಗೆ ಹೇಳುವರು ಎಂದು ಮೂದಲಿಸುತ್ತಾಳೆ. ಗುರು, ಲಿಂಗ, ಜಂಗಮ, ಪ್ರಸಾದದ ಬಗ್ಗೆ ನಿಖರವಾಗಿ ಮಾತನಾಡಿದ್ದಾಳೆ. ಕಪಟಿಗಳು, ಸುಳ್ಳನಾಡುವವರು ಭಕ್ತರಲ್ಲ ಎನ್ನುವಳು. ನಿಜದ ನೆಲೆಯಲ್ಲಿ ಭಕ್ತಿ ಒಡಮೂಡಬೇಕು ಎನ್ನುವಳು. ನಿಂದಿಸಿ, ವಂದಿಸಿ ಕೊಳ್ಳುವುದು ಪ್ರಸಾದವಲ್ಲ. ಪ್ರಸಾದಕ್ಕೆ ಭಕ್ತಿಭಾವ ಇರಬೇಕು. ನಿಜವಾದ ಭಕ್ತರು ಎಲ್ಲದರಲ್ಲೂ ಗುರುತ್ವವನ್ನು ಕಂಡುಕೊಳ್ಳುವರು. ಕಾಳವ್ವೆಯ ಪ್ರಶ್ನೆಗಳು ಹೊಸ ಅರಿವನ್ನು ಸೃಷ್ಟಿಸುತ್ತವೆ. ಸತ್ಯ ಶುದ್ಧವಲ್ಲದದು ಕಾಯಕವಲ್ಲ. ಆಸೆಯೆಂಬುದು ಭವದ ಬೀಜ. ನಿರಾಸೆಯೆಂಬುದು ನಿತ್ಯಮುಕ್ತಿ ಎನ್ನುವ ಅದ್ಭುತವಾದ ಸಂದೇಶಗಳನ್ನು ಸರಳವಾದ ಶಬ್ದಗಳಲ್ಲಿ ವಿವರಿಸುವ ಪರಿ ಆಕೆ ಏರಿದ ಅರಿವಿನ ಪರಿದಿಯನ್ನು ಸೂಚಿಸುತ್ತದೆ. ಕಾಳವ್ವೆ ಕೇಳುವ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಈ ಕಾಲದಲ್ಲಿಯೂ ಮರುಶೋಧನೆಗೆ ಅನುವು ಮಾಡಿಕೊಡುತ್ತದೆ ಎಂದರು.
ಅಧ್ಯಾಪಕ ಕೆ ವಿರೂಪಾಕ್ಷಪ್ಪ ಸ್ವಾಗತಿಸಿದರು. ಶಿವಸಂಚಾರದ ಕೆ ಜ್ಯೋತಿ, ಕೆ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ಅತ್ಯಂತ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಅರಸೀಕೆರೆಯ ಮಾಜಿ ಶಾಸಕ ದಿವಂಗತ ಜಿ ವಿ ಸಿದ್ಧಣ್ಣನವರ ಸ್ಮರಣಾರ್ಥ ಜಿ ವಿ ಬಸಣ್ಣ ಮತ್ತು ಸಹೋದರರು ಈ ದಿನದ ದಾಸೋಹಿಗಳಾಗಿದ್ದರು.
ಕಾರ್ಯಕ್ರಮ ಶಿವಸಂಚಾರ ಯೂಟೂಬ್, ಶಿವಸಂಚಾರ-ಸಾಣೇಹಳ್ಳಿ ಮತ್ತು ಮತ್ತೆ ಕಲ್ಯಾಣ ಫೇಸ್ ಬುಕ್, ಶಿವಸಂಚಾರ ವೆಬ್ಸೈಟ್ ಹಾಗೂ ಬಸವ, ಜನಸ್ಪಂದನ, ವಿ ಒನ್, ಜೈ ಭೀಮ್ ಟಿ ವಿ ಚಾನೆಲ್ಗಳಲ್ಲೂ ನೇರಪ್ರಸಾರವಾಯಿತು. ಸಾವಿರಾರು ಜನ ಕಾರ್ಯಕ್ರಮ ವೀಕ್ಷಸಿದ್ದಲ್ಲದೆ ಹಲವರು ಪ್ರತಿಕ್ರಿಯಿಸಿದರು.
– ಹೆಚ್ ಎಸ್ ದ್ಯಾಮೇಶ್

About The Author

Leave a Reply

Your email address will not be published. Required fields are marked *