May 5, 2024

Chitradurga hoysala

Kannada news portal

ಗುರುವಾದವರು ಅರಿವುಳ್ಳವರಾಗಿ ಬೇರೆಯವರ ಅಜ್ಞಾನವನ್ನು ಕಳೆಯುವ ಸಾಮಥ್ರ್ಯಹೊಂದಿರಬೇಕು. ಸ್ವಚ್ಛತೆ ಬದುಕಿನ ನಿರಂತರ ಕ್ರಿಯೆಯಾಗಬೇಕೇ ಹೊರತು ಸಾಂದರ್ಭಿಕ ಘಟನೆಯಾಗಬಾರದು

1 min read

ಗುರುವಾದವರು ಅರಿವುಳ್ಳವರಾಗಿ ಬೇರೆಯವರ ಅಜ್ಞಾನವನ್ನು ಕಳೆಯುವ ಸಾಮಥ್ರ್ಯಹೊಂದಿರಬೇಕು. ಸ್ವಚ್ಛತೆ ಬದುಕಿನ ನಿರಂತರ ಕ್ರಿಯೆಯಾಗಬೇಕೇ ಹೊರತು ಸಾಂದರ್ಭಿಕ ಘಟನೆಯಾಗಬಾರದು

ಸಾಣೇಹಳ್ಳಿ, ಅಗಸ್ಟ್ 7; ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಆಯೋಜಿಸಿರುವ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಮಾನವನ ಬದುಕಿಗೆ ಅನ್ನ, ಅರಿವೆ, ಔಷಧಿಗಿಂತ ಮುಖ್ಯವಾದದು ಅರಿವು ಮತ್ತು ಜ್ಞಾನ. ಇವಿಲ್ಲದ ಬದುಕು ಬದುಕೇ ಅಲ್ಲ. ಅಕ್ಕಮ್ಮ ಈ ಹಿನ್ನೆಲೆಯಲ್ಲಿ ಧರ್ಮದ ಅರಿವಿಲ್ಲದ ವೇಷಾಡಂಬರಿಗಳ ಬಣ್ಣವನ್ನು ತನ್ನ ವಚನಗಳ ಮೂಲಕ ಬಯಲು ಮಾಡಿದ್ದಾಳೆ. ಗುರುವಾದವರು ಅರಿವುಳ್ಳವರಾಗಿ ಬೇರೆಯವರ ಅಜ್ಞಾನವನ್ನು ಕಳೆಯುವ ಸಾಮಥ್ರ್ಯಹೊಂದಿರಬೇಕು. ಸ್ವಚ್ಛತೆ ಬದುಕಿನ ನಿರಂತರ ಕ್ರಿಯೆಯಾಗಬೇಕೇ ಹೊರತು ಸಾಂದರ್ಭಿಕ ಘಟನೆಯಾಗಬಾರದು. ಬಾಹ್ಯ ವೇಷ ಮುಖ್ಯವಾಗದೆ ಅರಿವು ಮತ್ತು ಆಚಾರ ಮುಖ್ಯವಾಗಬೇಕೆನ್ನುವುದು ಅಕ್ಕಮ್ಮನ ಕಳಕಳಿ. ಅಕ್ಕಮ್ಮ ಅತ್ಯಂತ ತಳವರ್ಗದಿಂದ ಬಂದವಳು. ಹುಟ್ಟು, ಜಾತಿ, ಶ್ರೀಮಂತಿಕೆ, ಬಡತನದ ಆಧಾರದ ಮೇಲೆ ವ್ಯಕ್ತಿತ್ವನ್ನು ಅಳೆಯಲು ಸಾಧ್ಯವಿಲ್ಲ. ಆಚಾರವೇ ಪ್ರಾಣವಾದ ರಾಮೇಶ್ವರಲಿಂಗವೆಂಬುದು ಆಕೆಯ ವಿನೂತನವಾದ ಅಂಕಿತ. ಈ ಅಂಕಿತವುಳ್ಳ 154 ವಚನಗಳು ದೊರೆತಿವೆ. ಇವುಗಳಲ್ಲಿ ವ್ರತ, ಶೀಲ, ಆಚಾರ, ಲಿಂಗ, ಜಂಗಮ, ಪಂಚಾಚಾರ ವಿಚಾರಗಳು ಪ್ರತಿಪಾದಿತವಾಗಿವೆ. ಆಕೆಯ ಜನ್ಮಸ್ಥಳ, ಕೌಂಟುಂಬಿಕ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ. ಆಕೆ ಸಮಾಜದ ಹುಳುಕಳನ್ನು ನಿರ್ಭೀತವಾಗಿ ಹೊರಹಾಕಿದ್ದಾಳೆ. ಕಾಯದಲ್ಲಿಯೇ ಆತ್ಮೋದ್ಧಾರದ ಮಾರ್ಗವನ್ನು ಕಂಡುಕೊಂಡವಳು. ಮೊದಲಿಗೆ ವೇಶ್ಯಾವೃತ್ತಿ ಮಾಡುತ್ತಿದ್ದರೂ ಶರಣರ ಸಂಪರ್ಕಕ್ಕೆ ಬಂದ ಮೇಲೆ ಆ ವೃತ್ತಿಯನ್ನು ನಿರಾಕರಿಸಿ ಶುದ್ಧ ಸಾತ್ವಿಕ ಬದುಕನ್ನು ಸಾಗಿಸುತ್ತಿದ್ದಳು ಎನ್ನುವುದಕ್ಕೆ ಆಕೆಯ ವಚನಗಳೇ ಸಾಕ್ಷಿ ನುಡಿಯುತ್ತಿವೆ. ಆಕೆಯ ಪ್ರತಿಯೊಂದ ವಚನಗಳು ಆಚಾರ ಮತ್ತು ವಿಚಾರ ಶುದ್ಧಿಯನ್ನು ಹೇಳುತ್ತವೆ. ಅನಾಚಾರಗಳನ್ನು ದೇವರು ಮಾಡಿದರೂ ಆಕೆ ಸಹಿಸಳು. ಆಕೆಗೆ ಮುಖ್ಯವಾದದ್ದು ಕಾಯಕ. ಕಾಯಕ ಮಾಡುವ ಭಕ್ತನ ಅಂಗಳವೇ ಅವಿಮುಕ್ತ ಕ್ಷೇತ್ರ ಎನ್ನುವಳು.
ಕಾಯಕದ ಜೊತೆಗೆ ಗುರು ದರ್ಶನ, ಲಿಂಗಪೂಜೆ, ಜಂಗಮಸೇವೆ, ಸದ್ಭಕ್ತರ ಜೊತೆ ಸಂಭಾಷಣೆ ಮಾಡಬೇಕು ಎನ್ನುವಳು. ಮಾಡಬಾರದ್ದನ್ನು ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡರೆ ಮಾಡಿದ ಪಾಪ ಕಳೆದುಹೋಗುವುದಿಲ್ಲ. ಪ್ರಾಯಶ್ಚಿತ್ತಕ್ಕಿಂತ ಪಶ್ಚಾತ್ತಾಪದ ಮಾರ್ಗ ಅನುಕರಣೀಯವಾದುದು. ಎಲ್ಲವ ಮೀರಿ ಶೀಲವಂತನಾಗಿ ಸದಾಚಾರದಿಂದ ನಡೆಯುವವಿಗೆ ರೋಗಗಳ ಭಯವಿರುವುದಿಲ್ಲ. ಪಂಚೇಂದ್ರಿಯಗಳ ಹತೋಟಿ ಬಹಳ ಮುಖ್ಯ. ಶರಣರ ಸಂಗ ಸ್ವಾನುಭಾವ ಬೆಳೆಸುವವು. ನಿಜವಾದ ವ್ರತ ಎಂದರೆ ಶಿವಪೂಜೆ ಮಾಡುವುದು, ಶಿವನ ಧ್ಯಾನದಲ್ಲಿರುವುದು, ಶಿವಾನುಭಾವಿಗಳ ಸತ್ಸಂಗದಲ್ಲಿರುವ ಬಗ್ಗೆ, ಎಂಥ ವ್ರತಾಚರಣೆಗಳು ಇರಬೇಕು, ಇರಬಾರದೆನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾಳೆ.
ಗುರು ಸದಾಚಾರಿಯಾಗಿ, ಸುಜ್ಞಾನಿಯಾಗಿ, ಭಕ್ತರ ಅಜ್ಞಾನವನ್ನು ನಿವಾರಿಸಿ ಸನ್ಮಾರ್ಗವನ್ನು ತೋರಿಸುವುದರ ಜೊತೆಗೆ ಶರಣರ ಚಿಂತನೆಗಳಿಗೆ ಅನುಗುಣವಾಗಿ ತನ್ನ ಬದುಕನ್ನು ಕಟ್ಟಿಕೊಳ್ಳಬೇಕು. ಹಾಗಾಗದೆ ಗುರುವೇ ಅನಾಚಾರಿ, ಅಜ್ಞಾನಿ, ಮೂಢಾಚಾರಣೆಗಳಲ್ಲಿ ಮುಳುಗಿದ್ದರೆ ಆತ ಗುರುವಾಗುವುದಿಲ್ಲ. ಜಾಗೃತಾವಸ್ಥೆಯಲ್ಲಿ ಏನು ಯೋಚಿಸುವೆವೋ ಅವೇ ಕನಸಿನಲ್ಲೂ ಬರುವವು. ಹಾಗಾಗಿ ಜಾಗೃತಾವಸ್ಥೆಯಲ್ಲಿ ಎಚ್ಚರದಿಂದಿರಬೇಕು.
ಅಕ್ಕಮ್ಮ ಪಂಚಾಚಾರಗಳಿಗೆ ಹೆಚ್ಚು ಒತ್ತು ನೀಡುವಳು. ಪಂಚಾಚಾರಿಗಳಲ್ಲದವರು ಇಹ-ಪರಕ್ಕೆ ಸಲ್ಲುವುದಿಲ್ಲ ಎನ್ನುವಳು. ವಿರಕ್ತರ ಬಗ್ಗೆ ಸ್ಪಷ್ಟನೆ ನೀಡುತ್ತ ವ್ಯಕ್ತಿ ವೇಷದಿಂದ, ಭಾಷೆಯಿಂದ ವಿರಕ್ತನಾಗಲು ಸಾಧ್ಯವಿಲ್ಲ. ಮೋಸ ತಟವಟಗಳಿಲ್ಲದ ಬದುಕು ವಿರಕ್ತರದು. ಅಕ್ಕಮ್ಮನ ಆಚಾರ ನಿಷ್ಠೆ ಅಚಲವಾದುದು. ಪರಧನದ ಆಸೆ, ಪರಸ್ತ್ರೀಯರ ಮೋಹಕ್ಕೆ ಒಳಗಾಗದೇ ಇರುವುದೇ ವ್ರತ ಎನ್ನುವಳು. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ದಯೆಯನ್ನು ಜೀವನದ ಬಂಡವಾಳವನ್ನಾಗಿಸಿಕೊಳ್ಳಬೇಕು ಇಂಥ ಆಚಾರವೇ ದೇವರು, ಪ್ರಾಣ ಎನ್ನುವಳು. ಇಂಥ ಅಕ್ಕಮ್ಮನ ನಿಷ್ಠೆ, ವ್ರತಾಚರಣೆ ನಮ್ಮದಾಗಬೇಕು ಎಂದರು.

ಹೆಣ್ಣಿನ ಲೋಕ ನಿಂದನೆಯ ಕತೆ ಇಂದು-ನಿನ್ನೆಯದಲ್ಲ. ಸಮಾಜ ಕೂಡ ಹೆಣ್ಣಿನ ಶಕ್ತಿಯನ್ನು ಅನುಮಾನಿಸುತ್ತಲೇ ಬರುತ್ತಿದೆ.

ಉಪನ್ಯಾಸ ಮಾಲಿಕೆಯಲ್ಲಿ `ಅಕ್ಕಮ್ಮ’ ವಿಷಯ ಕುರಿತಂತೆ ಬೆಂಗಳೂರಿನ ಸಾಹಿತಿ, ಸಾಕ್ಷ್ಯಚಿತ್ರ ನಿರ್ದೇಶಕಿ, ನಿರ್ಮಾಪಕಿ ಡಾ. ಪಿ ಚಂದ್ರಿಕಾ ಮಾತನಾಡಿ 12 ನೆಯ ಶತಮಾನದ ವಚನಗಳು ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಪರ್ಯಾಯಗಳು. ಹುಟ್ಟಿನಿಂದ ಬಂದ ಜಾತಿ, ಸಾಮಾಜಿಕ ಅಂತಸ್ತು ಮುಖ್ಯವಲ್ಲ; ಆತ್ಮದ ಉದ್ದರಣಕ್ಕೆ ತಾನೇ ಕಾರಣನಾಗುವ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗುವ ಘನ ಉದ್ದೇಶವನ್ನು ವಚನ ಚಳುವಳಿ ಹೊಂದಿತ್ತು. ಶ್ರಮಮೂಲದ ಸಮುದಾಯವು ತಮ್ಮ ತಮ್ಮ ಧ್ವನಿಗಳನ್ನು ದಾಖಲಿಸಲು ಸಾಧ್ಯವಾಯಿತು. ಹೆಣ್ಣಿನ ಲೋಕ ನಿಂದನೆಯ ಕತೆ ಇಂದು-ನಿನ್ನೆಯದಲ್ಲ. ಸಮಾಜ ಕೂಡ ಹೆಣ್ಣಿನ ಶಕ್ತಿಯನ್ನು ಅನುಮಾನಿಸುತ್ತಲೇ ಬರುತ್ತಿದೆ. ಇಂಥ ಲೋಕನಿಂದನೆಗೆ ಅಳುವ ಬದಲು ಮಾತನಾಡಿದಂತಹ ಮೊದಲ ಮಾತುಗಳು ವಚನಗಳು. ಹೀಗೆ ನಿಯಮಗಳ ಜಗತ್ತನ್ನು ಧಿಕ್ಕರಿಸಿ ನಿಯಮರಹಿತ ಜಗತ್ತಿಗೆ ಪ್ರವೇಶಿಸಿ ಜೀವನ್ಮರಣದ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾದ ಸಂಗತಿಯಲ್ಲ. ವಚನಗಳು ರಂಜನೆಯಾಗದೆ; ಅಮಿತವಾದದ್ದನ್ನು ಆಶಿಸಿ ನಿನ್ನೆಗಳಿಗೆ ಬೇರು ಬಿಟ್ಟಂತಹ ವಟವೃಕ್ಷಗಳಿದ್ದಂತೆ. ವಚನಕಾರರು ಇಂದ್ರಿಯಾತೀತವಾದುದನ್ನು ಇಂದ್ರಿಯಗಳ ಮೂಲಕ ಕಂಡರಿಸಿದವರು.
ವಚನಕಾರ್ತಿಯರು ತನ್ನ ಅಸ್ತಿತ್ವವನ್ನೇ ಪ್ರಶ್ನಿಸಿದ ಗಂಡನ್ನೇ ಪ್ರಶ್ನಿಸುವುದರ ಮೂಲಕ ಪ್ರೇರಕ ಶಕ್ತಿಯಾಗುವರು. ಹೀಗಾಗಿ ವಚನಗಳು ಇಂದಿಗೂ ಎಲ್ಲ ವಿಚಾರವಂತರನ್ನು ತನ್ನೆಡೆಗೆ ಸೆಳೆಯುತ್ತಿವೆ. ಸಾಮಾಜಿಕ ನ್ಯಾಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶವನ್ನು ವಚನ ಚಳುವಳಿ ಹೊಂದಿತ್ತು. ಮೂಖವಾದ ಬಾಯಿಗೆ ಮಾತನಾಡುವ ಶಕ್ತಿಯನ್ನು ಒದಗಿಸಿತು. ಕೀಳರಿಮೆಯನ್ನು ಮೀರಿದ ಸ್ಥಿತಿಯನ್ನು ನಿರ್ಮಿಸಿತು. ಆತ್ಮೋದ್ಧಾರಣಕ್ಕಾಗಿ ಗಂಡು-ಹೆಣ್ಣೆಂಬ ಬೇಧವಿಲ್ಲದ ದಾರಿಯನ್ನು ವಚನ ಚಳುವಳಿ ತಿಳಿಸಿಕೊಟ್ಟಿತು.
ತುಂಬ ಗಟ್ಟಿಯಾಗಿ ಮಾತನಾಡುವ ಅಕ್ಕಮ್ಮನ 153 ವಚನಗಳು ದೊರೆತಿವೆ. ಆಚಾರವೇ ಪ್ರಾಣವಾದ ರಾಮೇಶ್ವರ ವಚನಾಂಕಿತ. ಈ ವಚನಗಳಲ್ಲಿ ಸನ್ನಡತೆ, ಸದಾಚಾರ, ಸದ್ವಿಚಾರಗಳಲ್ಲಿ ದೇವರನ್ನು ಕಾಣುವ ಪ್ರಯತ್ನ ಕಾಣುತ್ತದೆ. ಅಕ್ಕಮ್ಮ ಬಸವಾದಿ ಶರಣರ ಸಮಕಾಲೀನಳು. ದೇಹವಿಕ್ರಯ ಮಾಡುತ್ತಿದ್ದ ಕಸುಬನ್ನು ಮಾಡುತ್ತಿರುವ ಸೂಚನೆಗಳು ಆಕೆಯ ವಚನಗಳಿಂದ ದೊರೆಯುವುದು. ಆಕೆಯ ಒಂದೊಂದು ವಚನವೂ ವೈಚಾರಿಕ ಆವರಣದಲ್ಲಿ ನಮಗೆ ಬೆಳಕು ತಂದುಕೊಡುತ್ತವೆ. ನೇರನುಡಿಯ ವಿಚಕ್ಷಣ, ವಿಚಕ್ಷಕ ದೃಷ್ಟಿಯಿಂದ ಸಂಗತಿಗಳಿಗೆ ಸ್ಪಂದಿಸುವ ಅಕ್ಕಮ್ಮ ನಮ್ಮ ನಡೆ-ನುಡಿಯನ್ನು ತಿದ್ದುವ ಪ್ರಯತ್ನ ಮಾಡುವಳು. ವ್ರತವೆಂದರೆ ಅನುಕೂಲಸಿಂಧುವಲ್ಲ; ಸಿದ್ಧ ಅವಸ್ಥೆಗಳನ್ನು ನಿರಾಕರಿಸುವ, ಬಹಿರಾಡಂಬರಗಳಲ್ಲಿ ಇಲ್ಲದಿರುವುದು. ಮನವನ್ನು ಕಟ್ಟಿಹಾಕುವುದೇ ವ್ರತದ ಮೊದಲ ಕೆಲಸ. ಒಂದು ನೋಟ, ಒಂದೇ ಭಾವ, ಒಂದೇ ಮನಸ್ಸು ಅದು ಮಾತ್ರವೇ ವ್ರತ. ಪರವಸ್ತುವನ್ನು ಕಾಣುವ ನಿಚ್ಛಳಿಕೆ ವ್ರತ ಎನ್ನುವುದು ಆಕೆಯ ನಿಲುವು.
ದೇವರು ಅಂದರೆ ನಿಷ್ಕಳಂಕ, ಜಗತ್ತನ್ನು ಉದ್ದಾರ ಮಾಡುವುದೇ ಅವನ ಕೆಲಸ. ವೇಷವನ್ನು ಧರಿಸಿ ನಂಬಿದವನನ್ನು ಪರೀಕ್ಷೆ ಮಾಡುವುದಲ್ಲ. ಹಾಗೆ ಮಾಡಿದರೆ ಅವನು ದೇವರು ಹೇಗಾಗುತ್ತಾನೆ ಎಂದು ಪ್ರಶ್ನಿಸುತ್ತಾಳೆ. ಸಮಾಜದ ಜನ ಮಾತ್ರವಲ್ಲ ಆಧ್ಯತ್ಮವೂ ಆಕೆಯ ವಿಚಕ್ಷಣೆಗೆ ಒಳಗಾಗುತ್ತದೆ. ಒಮ್ಮನದಿಂದ ನಡೆಯದಿದ್ದರೆ ಪಾಶವಾಗಿ ಕೊರಳನ್ನು ಸುತ್ತುವುದು. ಶೀಲವು ಆತ್ಮ ಸಂವೇದಿಯಾದುದು. ಅದು ಮುತ್ತಿನ ಹಾಗೆ ಒಮ್ಮೆ ಒಡೆದರೆ ಮತ್ತೆ ಕೂಡಿಸಲು ಸಾಧ್ಯವಿಲ್ಲ. ಸಮಶೀಲಕರ ಜೊತೆ ವ್ಯವಹರಿಸಬೇಕು. ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು. ಆಚಾರ ಮನಕ್ಕಷ್ಟೇ ಅಲ್ಲ ದೇಹಕ್ಕೂ ಹೌದು. ದೇಹ ಭಗವಂತನನ್ನು ಕಾಣಲು ಇರುವ ಸಾಧನ. ದೇಹ ಬೇರೆ ಆತ್ಮ ಬೇರೆ ಅಲ್ಲ. ಸಮಾಜ ಕೊಟ್ಟಿರುವ ಶೀಲದ ಕಲ್ಪನೆಯನ್ನು ಹೊಡೆದು ಹಾಕುವಳು. ಶೀಲ ಕೇವಲ ಹೆಣ್ಣಿಗೆ ಮಾತ್ರವಲ್ಲ. ಗಂಡಿಗೂ ಅನ್ವಯಿಸುವುದು. ಗುರು, ಲಿಂಗ, ಜಂಗಮಕ್ಕಿಂತ ಕಾಯಕವೇ ಮೊದಲು. ಸ್ವಕಾರ್ಯದಿಂದ ಮಾಡುವ ವ್ರತವೇ ನೈಜವಾದುದು. ಆತ್ಮದ ಅರಿವೇ ಶೀಲ. ಕಾಯವೇ ಸಾಧನ. ಭಿನ್ನವಾಗದೆ ಸಂದೇಹವನ್ನು ಹರಿದುಕೊಳ್ಳಬೇಕು. ಬಂದುದ ಸಾಕೆನ್ನದೆ ಬಾರದುದ ತಾ ಎನ್ನದೆ ಬದುಕಬೇಕು ಎನ್ನುವಳು. ಸಮತೆಯನ್ನು ದೇಹ-ಮನಸು, ದೈವ-ನಿಯಾಮ, ವ್ಯಕ್ತಿ-ಸಮಾಜ, ಸಂಬಂಧ-ಸಮೂಹಗಳ ವರೆಗೆ ವಿಸ್ತರಿಸುವಳು. ಸಮಾಜದ ಬಗ್ಗೆ ಆಕೆಗೆ ವಿಪರೀತ ಕಾಳಜಿಯಿದೆ. ಕಾಯ ಮತ್ತು ಕಾಯಕಗಳೇ ಈಕೆಯ ಎಲ್ಲ ಮಾತುಗಳ ಊರುಗೋಲು. ಜೀವನ ಶೋಧಕ್ಕಾಗಿ ತನ್ನನ್ನೇ ಒತ್ತೆಯಿಟ್ಟುಕೊಳ್ಳುವ ಅಕ್ಕಮ್ಮ ಹೇಳುವ ವಿಚಾರಗಳ ಕ್ರಮ, ತೀವ್ರತೆ, ನಿಷ್ಠುರತೆಗಳನ್ನು ಮತ್ತೆ ಮತ್ತೆ ಓದಿಗೆ ಒಳಗು ಮಾಡಬೇಕಿದೆ ಎಂದರು.

ಗುಲ್ಬರ್ಗದ ಸುನಿಲ್ ಹುಡುಗಿ ಸ್ವಾಗತಿಸಿದರು. ಶಿವಸಂಚಾರದ ಕೆ ಜ್ಯೋತಿ, ಕೆ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ಅತ್ಯಂತ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಹೊಳಲ್ಕೆರೆ ತಾಲ್ಲೂಕು ಗುಂಜಿಗನೂರಿನ ಇಂದ್ರಪ್ಪ ಗೌಡ್ರು ಈ ದಿನದ ದಾಸೋಹಿಗಳಾಗಿದ್ದರು.

ಕಾರ್ಯಕ್ರಮ ಶಿವಸಂಚಾರ ಯೂಟೂಬ್, ಶಿವಸಂಚಾರ-ಸಾಣೇಹಳ್ಳಿ ಮತ್ತು ಮತ್ತೆ ಕಲ್ಯಾಣ ಫೇಸ್ ಬುಕ್, ಶಿವಸಂಚಾರ ವೆಬ್ಸೈಟ್ ಹಾಗೂ ಬಸವ, ಜನಸ್ಪಂದನ, ವಿ ಒನ್, ಜೈ ಭೀಮ್ ಟಿ ವಿ ಚಾನೆಲ್ಗಳಲ್ಲೂ ನೇರಪ್ರಸಾರವಾಯಿತು. ಸಾವಿರಾರು ಜನ ಕಾರ್ಯಕ್ರಮ ವೀಕ್ಷಸಿದ್ದಲ್ಲದೆ ಹಲವರು ಪ್ರತಿಕ್ರಿಯಿಸಿದರು.
– ಹೆಚ್ ಎಸ್ ದ್ಯಾಮೇಶ್

About The Author

Leave a Reply

Your email address will not be published. Required fields are marked *