May 15, 2024

Chitradurga hoysala

Kannada news portal

ಮನೆ ಮನೆಗೆ ಗ್ಯಾಸ್ ಪಿಎನ್‍ಜಿ ಸಂಪರ್ಕ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

1 min read

ಮನೆ ಮನೆಗೆ ಗ್ಯಾಸ್ ಪಿಎನ್‍ಜಿ ಸಂಪರ್ಕ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ,ಆಗಸ್ಟ್09:
ಕೋಟೆನಾಡು ಚಿತ್ರದುರ್ಗದಲ್ಲೀಗ ಮನೆಗೆ ನೇರವಾಗಿ ಪೈಪ್‍ಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುತ್ತಿದ್ದು, ಅಡುಗೆ ಮನೆಗೆ ಮೊದಲ ಪೈಪ್‍ಲೈನ್ ಗ್ಯಾಸ್ ಸಂಪರ್ಕವನ್ನು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು.
ನಗರದ ಧವಳಗಿರಿ ಬಡಾವಣೆ ಎರಡನೇ ಹಂತದ ಎರಡನೇ ಮುಖ್ಯರಸ್ತೆಯ ಮೂರನೇ ಕ್ರಾಸ್‍ನಲ್ಲಿರುವ ಪೊಲೀಸ್ ಇಲಾಖೆಯಲ್ಲಿ ನಿವೃತ್ತಿ ಹೊಂದಿದ ಜಿ.ಎಸ್.ಗುರುಮೂರ್ತಿ ಮನೆಯಲ್ಲಿ ಪೈಪ್‍ಲೈನ್ ಗ್ಯಾಸ್ ಸಂಪರ್ಕ ಪಿಎನ್‍ಜಿ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪಿಎನ್‍ಜಿ ಸಂಪರ್ಕವನ್ನು ಪ್ರಾರಂಭಿಕ ಹಂತದಲ್ಲಿ 15 ಮನೆಗಳಿಗೆ ಕೊಡಲಾಗುತ್ತಿದೆ. ಪಿಎನ್‍ಜಿ ಸಂಪರ್ಕ ದೊಡ್ಡ ನಗರಗಳಾದ ಬಾಂಬೆ, ದೆಹಲಿ, ಗುಜರಾತ್‍ನಂತಹ ನಗರಗಳಲ್ಲಿ ಇತ್ತು. ಇದೀಗ ಚಿತ್ರದುರ್ಗದಲ್ಲಿಯೂ ಪ್ರಾರಂಭವಾಗಿದೆ. ನಗರದ ದವಳಗಿರಿ ಬಡಾವಣೆ, ನೆಹರು ನಗರ ಮತ್ತು ಬಿವಿಕೆಎಸ್ ಬಡಾವಣೆಗಳಲ್ಲಿ ಕೆಲಸ ನಡೆಯುತ್ತಿದೆ. ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬೇಗ ಕಾಮಗಾರಿ ಪ್ರಾರಂಭಿಸಬೇಕು ಎಂದು ಶಾಸಕರು ಹೇಳಿದರು.
ಪಿಎನ್‍ಜಿ ಸಂಪರ್ಕ ಸುರಕ್ಷಿತ ಹಾಗೂ ಕಡಿಮೆ ಬೆಲೆಗೆ ದೊರೆಯಲಿದೆ. ಅನಿಲ ವ್ಯರ್ಥವಾಗುವುದಿಲ್ಲ. ಸಿಲಿಂಡರ್ ಮಾಡುವ ಅಗತ್ಯವಿಲ್ಲ. ಗ್ರಾಹಕರಿಗೆ ನಿರಂತರವಾಗಿ ಅನಿಲಪೂರೈಕೆಯಾಗಲಿದೆ. ಇದರಿಂದ ಶೇ.20 ರಿಂದ 25ರಷ್ಟು ಬೆಲೆ ಉಳಿತಾಯವಾಗಲಿದೆ. ಇಡೀ ಜಿಲ್ಲೆಗೆ ಪಿಎನ್‍ಜಿ ಸಂಪರ್ಕ ಕಲ್ಪಿಸಲು ಸುಮಾರು ಒಂದುವರೆ ವರ್ಷ ಆಗಬಹುದು. ಕಂಪನಿಯವರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.
ನಗರದಲ್ಲಿ ಸಿಮೆಂಟ್ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಇದರ ಜೊತೆಗೆ ನಗರದ ಪ್ರತಿ ಮನೆ ಮನೆಗೂ ಗ್ಯಾಸ್ ಸಂಪರ್ಕ ವ್ಯವಸ್ಥೆ ಸೇರಿದಂತೆ ಚಿತ್ರದುರ್ಗವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕರು ಹೇಳಿದರು.
ಯೂನಿಸನ್ ಎನ್ವಿರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಡಿಷನಲ್ ಜನರಲ್ ಮ್ಯಾನೇಜರ್ ಸಂದೀಪ್ ಶರ್ಮಾ ಮಾತನಾಡಿ, ರಾಜ್ಯದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಮನೆಯ ಅಡುಗೆ ಮನೆಗಳಿಗೆ ಪೈಪ್‍ಲೈನ್ ಗ್ಯಾಸ್ ಸರಬರಾಜು ಮಾಡಲು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ ಅನುಮತಿ ನೀಡಿದೆ.

ಕಂಪನಿಯು ತನ್ನ ಮೊದಲ ಪಿಎನ್‍ಜಿ ಸಂಪರ್ಕವನ್ನು ಚಿತ್ರದುರ್ಗ ನಗರದಲ್ಲಿ ಅಶೋಕ ಬ್ರಾಂಡ್ ಅಡಿಯಲ್ಲಿ ಆರಂಭಿಸಿದೆ. ನಗರದ ಅಡುಗೆ ಮನೆಗಳಿಗೆ ಗ್ಯಾಸ್ ಪೂರೈಸಲು ಪೈಪ್‍ಲೈನ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ನಗರದ ಧವಳಗಿರಿ ಬಡಾವಣೆ, ನೆಹರು ನಗರ, ಬಿವಿಕೆಎಸ್ ಬಡಾವಣೆ, ಮುನ್ಸಿಪಲ್ ಕಾಲೋನಿ, ಬಿಎಲ್‍ಗೌಡ ಲೇಔಟ್ ಪ್ರದೇಶಗಳಲ್ಲಿ 45 ಕಿ.ಮೀಗಿಂತ ಹೆಚ್ಚು ಪೈಪ್‍ಲೈನ್ ಹಾಕಲಾಗಿದೆ ಎಂದರು.
ಒಂದು ಮನೆಗೆ ಗ್ಯಾಸ್ ಸಂಪರ್ಕ ಪಡೆಯಲು ರೂ.30,000/-ತಗಲುತ್ತದೆ. ಆದರೆ ಕಂಪನಿ ವತಿಯಿಂದ ರೂ.5000/-ಭದ್ರತಾಠೇವಣಿ, ಅರ್ಜಿ ಶುಲ್ಕ ರೂ.250/- ಹಾಗೂ ನೋಂದಣಿ ಶುಲ್ಕ ರೂ.1000/- ಪಾವತಿಸಿದರೆ ಪಿಎನ್‍ಜಿ ಸಂಪರ್ಕ ಪಡೆಯಬಹುದು ಎಂದರು.
42 ಸಿಎನ್‍ಜಿ ಕೇಂದ್ರ ಪ್ರಾರಂಭಿಸುವ ಗುರಿ: ಆಟೋ, ಬಸ್, ಕಾರ್ ಸೇರಿದಂತೆ ಎಲ್ಲ ರೀತಿಯ ವಾಹನಗಳಿಗೆ ಸಿಎನ್‍ಜಿ (ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಕಲ್ಪಿಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 42 ಸಿಎನ್‍ಜಿ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಜಿ.ಆರ್.ಹಳ್ಳಿಯಲ್ಲಿ ಸಿಎನ್‍ಜಿ ರಿಟೈಲ್ ಔಟ್‍ಲೇಟ್ ಮಾಡಲಾಗಿದೆ. ಇದರ ಜೊತೆಗೆ ಪಿಬಿ ರಸ್ತೆಯ ಜಿಹೆಚ್‍ಆರ್ ಪೆಟೋಲ್ ಪಂಪ್‍ನಲ್ಲಿ ಸಿಎನ್‍ಜಿ ಕೇಂದ್ರ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಿರಿಯೂರು, ಚಳ್ಳಕೆರೆಯಲ್ಲಿ ಸಿಎನ್‍ಜಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಯೂನಿಸನ್ ಎನ್ವಿರೋ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸುನೀಲ್ ಪೂಜಾರಿ, ಧವಳಗಿರಿ ಬಡಾವಣೆಯ ಸಿ.ಜಿ.ಶ್ರೀನಿವಾಸ್, ಮರುಳಸಿದ್ಧಪ್ಪ, ಪಿಎನ್‍ಜಿ ಮೊದಲ ಸಂಪರ್ಕ ಪಡೆದ ಗುರುಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *