ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇದೆ: ಸುಪ್ರೀಂ ತೀರ್ಪು
1 min read2005ರಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ತಿದ್ದುಪಡಿಯಾಗಿತ್ತು. ಅದಕ್ಕಿಂತ ಮುಂಚೆ ತಂದೆ ನಿಧನರಾಗಿದ್ದರೆ ಆಕೆಯ ಮಗಳಿಗೆ ಆಸ್ತಿ ಮೇಲೆ ಹಕ್ಕು ಇರುತ್ತದಾ ಎಂಬ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ಇವತ್ತು ತೆರೆ ಎಳೆದಿದೆ.
ನವದೆಹಲಿ : ಹಿಂದೂ ಅವಿಭಜಿತ ಕುಟುಂಬದ ಆಸ್ತಿ ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇಂಥ ಕುಟುಂಬದಲ್ಲಿ ಹೆಣ್ಣುಮಕ್ಕಳಿಗೂ ಆಸ್ತಿ ಮೇಲೆ ಹಕ್ಕು ಇರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. 2005ರ ಹಿಂದೂ ಉತ್ತರಾಧಿಕಾರಿ ತಿದ್ದುಪಡಿ ಕಾಯ್ದೆ ಪ್ರಕಾರ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇದೆ ಎಂದು ನ್ಯಾ| ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠ ಹೇಳಿದೆ. ಗಮನಾರ್ಹ ಸಂಗತಿ ಎಂದರೆ, 2005ಕ್ಕಿಂತ ಮುಂಚೆಯೇ ತಂದೆ ಸತ್ತಿದ್ದರೂ ಆಸ್ತಿ ಮೇಲೆ ಮಗಳಿಗೆ ಹಕ್ಕು ಇರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2005ರಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆದರೆ, 2005ಕ್ಕಿಂತ ಮುಂಚಿನ ಪ್ರಕರಣಗಳಿಗೆ ಇದು ಅನ್ವಯ ಆಗುತ್ತದೋ ಅಥವಾ ಇಲ್ಲವೋ ಎಂಬ ಗೊಂದಲ ಇತ್ತು. ಸುಪ್ರೀಂ ನ್ಯಾಯಪೀಠ ನೀಡಿದ ಇವತ್ತಿನ ತೀರ್ಪಿನಲ್ಲಿ ಈ ಗೊಂದಲಕ್ಕೆ ತೆರೆ ಎಳೆಯಲಾಗಿದೆ. 2005ರಲ್ಲಿ ತಂದೆ ಮತ್ತು ಮಗಳು ಜೀವಂತವಾಗಿದ್ದರೆ ಮಾತ್ರ ಅಪ್ಪನ ಆಸ್ತಿಯಲ್ಲಿ ಮಗಳು ಆಸ್ತಿ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಈ ಮುಂಚಿನ ಕೆಲ ಪ್ರಕರಣಗಳಲ್ಲಿ ಇದೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠಗಳು ತೀರ್ಪು ನೀಡಿದ್ದರು. ಅದರಂತೆ ಆ ವಿಚಾರದಲ್ಲಿ ಗೊಂದಲ ಉಳಿದೇ ಇತ್ತು. ಈಗ ಇವತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ಗೊಂದಲ ಬಗೆಹರಿಸಿದೆ.
ಈಗ ತಂದೆ ಮತ್ತು ಮಗಳು 2005ರಲ್ಲಿ ಬದುಕಿರಲಿ ಅಥವಾ ನಿಧನಗೊಂಡಿರಲಿ ಮಗಳಿಗೆ ಆಸ್ತಿ ಹಕ್ಕು ಇದ್ದೇ ಇರುತ್ತದೆ. 2005ಕ್ಕಿಂತ ಮುಂಚೆಯೇ ಮಗಳು ಸಾವನ್ನಪ್ಪಿದ್ದರೂ ಆಕೆಯ ಮಕ್ಕಳು ಆ ಆಸ್ತಿಯ ಮೇಲೆ ಹಕ್ಕು ಸಾಧಿಸಬಹುದಾಗಿದೆ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದ್ದೇ ಇರುತ್ತದೆ ಎಂಬುದು ಸರ್ವೋಚ್ಚ ನ್ಯಾಯಪೀಠದ ತೀರ್ಪಿನಿಂದ ಸ್ಪಷ್ಟವಾಗಿದೆ.